ರಾಜಕೀಯ

ಜಾತಿ ಧರ್ಮ ನೋಡಿ ಕೊರೋನಾ ಬರುತ್ತಿಲ್ಲ, ಸಮುದಾಯವನ್ನು ಗುರಿಯಾಗಿಸಿ ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಸಿಎಂ ಇಬ್ರಾಹಿಂ

Srinivasamurthy VN

ಬೆಂಗಳೂರು: ಕೊರೋನಾ ವೈರಸ್ ಜಾತಿ, ಧರ್ಮವನ್ನು ನೋಡಿಕೊಂಡು ಬರುವುದಿಲ್ಲ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್​ ಸದಸ್ಯ ಸಿ ಎಂ ಇಬ್ರಾಹಿಂ  ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ನಾವು ಬಸವಣ್ಣನವರ ನಾಡಿನಲ್ಲಿ ಹುಟ್ಟಿ, ಒಂದೇ ಸಹೊದರತ್ವ ಭಾವನೆ ಹೊಂದಿದ್ದೇವೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ನಾವೆಲ್ಲರೂ ಬೊಟ್ಟು ಮಾಡದೆ ಒಟ್ಟಾಗಿ ಸಹಕರಿಸಬೇಕು. ಆ ಜಾತಿ, ಈ ಜಾತಿ ಅಂತ ಬೆರಳು ತೋರಿಸುವುದು  ಬೇಡ. ಎಲ್ಲಾ ಪಕ್ಷಗಳ ಕಾರ್ಯಕರ್ತರು ಇದನ್ನ ತಿಳಿದುಕೊಳ್ಳಬೇಕು. ಸುಳ್ಳು ಸುದ್ದಿಗಳನ್ನ ಹರಡುವುದನ್ನ ಬಿಡಬೇಕು. ಒಂದೇ ಸಮುದಾಯದ ಬಗ್ಗೆ ವರದಿಗಳು ಬರುತ್ತಿದ್ದು, ಇವು ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ಸುದ್ದಿ ಹಬ್ಬಿಸುವವರ ಮೇಲೆ ಪ್ರಕರಣ  ದಾಖಲಿಸಬೇಕು. ಕೊರೋನಾ ಯಾವ ಜಾತಿ ಧರ್ಮ ನೋಡಿ ಬರುತ್ತಿಲ್ಲ. ಇಂಗ್ಲೆಂಡ್ ಪ್ರಧಾನಿಗೆ ಸಾಕಷ್ಟು ನೋವು ನೀಡುತ್ತಿದೆ. ಅಮೆರಿಕಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೋಂಕಿಗೊಳಗಾಗಿದ್ದಾರೆ. ಆದರೆ, ಎಲ್ಲಿಯೂ ಜಾತಿ ಧರ್ಮ ಅಂತ ಬೊಟ್ಟು ಮಾಡಿಲ್ಲ. ಆದರೆ ರಾಜ್ಯದಲ್ಲಿ ಸಾಕಷ್ಟು ಬೊಟ್ಟು  ಮಾಡಲಾಗುತ್ತದೆ. ಹೀಗಾಗಿ ಒಂದೇ ಸಮುದಾಯದತ್ತ ಬೆರಳು ತೋರಿಸಬೇಡಿ. ಈ ರೀತಿಯ ಸುಳ್ಳು ಸುದ್ದಿಗೆ ಬ್ರೇಕ್ ಹಾಕಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಇವತ್ತು ಕೊರೊನಾ ಮಾಹಾಮಾರಿ ಜಗತ್ತನ್ನ ಕಾಡುತ್ತಿದ್ದು, ಹೆಚ್ಚಿನ ಅನಾಹುತಗಳು ನಮ್ಮ ದೇಶದಲ್ಲಿ ಆಗಿಲ್ಲ. ಕೇಂದ್ರ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿವೆ. ನಾವೆಲ್ಲರೂ ಸರ್ಕಾರದ ನಿಯಮವನ್ನು ಅನುಸರಿಸುತ್ತಿದ್ದೇವೆ. ಸಿಎಂ ನಮ್ಮ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದು,  ನಾವ್ಯಾರೂ ಮಸೀದಿ ಕಡೆ ಕೂಡ ತಲೆಹಾಕಲ್ಲ, ನಾವೆಲ್ಲರೂ ಮನೆಯಲ್ಲೇ ನಮಾಜ್ ಮಾಡುತ್ತೇವೆ. ರಂಜಾನ್ ಹಬ್ಬ ಶೀಘ್ರದಲ್ಲೇ ಬರುತ್ತಿದ್ದು. ಆ ಹಬ್ಬವನ್ನೂ ನಾವು ಮನೆಯಲ್ಲೇ ಮಾಡಿಕೊಳ್ಳುತ್ತೇವೆ ಎಂದು ಸಿಎಂ ನಡೆಸಿದ ಸಭೆಯಲ್ಲೂ ನಾವು ತಿಳಿಸಿದ್ದೇವೆ. ಲಾಕ್ ಡೌನ್ ನಿಂದ ಹೆಚ್ಚಿನ  ಸಮಸ್ಯೆಯಾಗುತ್ತಿದ್ದು, ಸರ್ಕಾರಿ ನೌಕರರ ವೇತನ ಕಡಿತ ಮಾಡಬೇಡಿ ಆದರೆ,  ನಮ್ಮ ಜನಪ್ರತಿನಿಧಿಗಳ ಸಂಬಳ ಬೇಕಾದರೆ ಕಡಿತ ಮಾಡಿಕೊಳ್ಳಿ. ಸರ್ಕಾರದ ಬಳಿಯೂ ಹಣವಿಲ್ಲ. ಹೀಗಾಗಿ ರಾಜ್ಯದ ಸಂಸದರು ಪಿಎಂ ಪರಿಹಾರ ನಿಧಿಗೆ ನೆರವು ನೀಡುವುದು ಬೇಡ. ಆ ನೆರವನ್ನ ನಮ್ಮ  ರಾಜ್ಯಕ್ಕೆ ನೀಡಿ ಎಂದು ತಿಳಿಸಿದರು.  

SCROLL FOR NEXT