ರಾಜಕೀಯ

ರಾಜ್ಯದ ಬಿಜೆಪಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಂದ ಹಣ ಪಡೆಯುತ್ತಿದೆ: ಡಿಕೆಶಿ ಆರೋಪ

Manjula VN

ಮಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ಖಾಸಗಿ ಆಸ್ಪತ್ರೆಗಳು ನೀಡುತ್ತಿರುವ ಕೋವಿಡ್ ಚಿಕಿತ್ಸಾ ಬಿಲ್'ಗಳಿಂದ ಸರ್ಕಾರಕ್ಕೂ ಹಣ ಹೋಗುತ್ತಿದೆ ಆರೋಪಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯುಷ್ಮಾನ್ ಭಾರತ್ ಮತ್ತು ಇತರ ಯೋಜನೆಗಳನ್ನು ಬಳಸಿಕೊಂಡು ಸರ್ಕಾರ ಎಲ್ಲರಿಗೂ ಉಚಿತ ಕೋವಿಡ್ ಚಿಕಿತ್ಸೆಯನ್ನು ನೀಡಬಹುದಿತ್ತು. ಆದರೆ, ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಚಿಕಿತ್ಸೆಗೆ ದರ ನಿಗದಿ ಮಾಡಿದ್ದಾರೆ. ಇದರ ಪರಿಣಾಮ ಖಾಸಗಿ ಆಸ್ಪತ್ರೆಗಳು ಲಕ್ಷಗಟ್ಟಲೆ ಹಣ ಬಿಲ್ ಮಾಡುತ್ತಿವೆ. ಖಾಸಗಿ ಆಸ್ಪತ್ರೆಗಳು ನೀಡುತ್ತಿರುವ ಬಿಲ್ ನಿಂದ ಸರ್ಕಾರಕ್ಕೂ ಹಣ ಬರುತ್ತಿದೆ ಎಂದು ಆರೋಪಿಸಿದ್ದಾರೆ. 

ರಾಜ್ಯ ಬಿಜೆಪಿ ಸರಕಾರ ನಡೆಸಿರುವ ಕೊರೋನಾ ಅವ್ಯವಹಾರದ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಕೋವಿಡ್ ಚಿಕಿತ್ಸೆ ಹಾಗೂ ನಿರ್ವಹಣೆ ಸಲುವಾಗಿ ನಡೆದ ಖರೀದಿಯಲ್ಲಿ ರೂ.2 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಪ್ರತಿಪಕ್ಷವಾಗಿ ಕಾಂಗ್ರೆಸ್ ಲೆಕ್ಕ ಕೇಳಿದರೆ ಸರಕಾರ ಕೇವಲ ಹಾರಿಕೆಯ ಉತ್ತರವನ್ನಷ್ಟೇ ನೀಡುತ್ತಿದೆ. ಸರಕಾರ ಪಾರದರ್ಶಕವಾಗಿ ವ್ಯವಹಾರ ನಡೆಸಿದ್ದರೆ ನ್ಯಾಯಾಂಗ ತನಿಖೆ ನಡೆಸಲಿ, ನಾವು ತನಿಖೆಯ ಸಂದರ್ಭದಲ್ಲಿ ಅವ್ಯವಹಾರದ ಮಾಹಿತಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. 

ರಾಜ್ಯದ ಬಿಜೆಪಿಗೆ ಸರಕಾರ ನಡೆಸಲು, ಆಡಳಿತ ನಡೆಸಲೂ ಗೊತ್ತಿಲ್ಲ ಎಂದು ಶಿವ ಕುಮಾರ್ ಟೀಕಿಸಿದರು. ಈ ಸರಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ, ಸರಕಾರ ಕೊರೊನಾದ ಹೆಣದ ಮೇಲೆ ಹಣ ಮಾಡುತ್ತಾ ಇದೆ. ಕೊರೊನಾಗಿಂತ ದೊಡ್ಡ ರೋಗ ಎಂದರೆ ಬಿಜೆಪಿ ಸರಕಾರ, ಬಿಜೆಪಿ ಸರಕಾರವೇ ದೊಡ್ಡ ಶಾಪ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕೊರೋನಾಗಿಂತ ಭಯಂಕರ ರೋಗ. ಈ ಬಿಜೆಪಿ ಸರ್ಕಾರವೇ ಜನರಿಗೆ ಶಾಪ. ನಾವೆಲ್ಲರೂ ಇಂದು ಕೊರೋನಾ ಸವಾಲಿನಲ್ಲಿ ಸಿಲುಕಿದ್ದೇವೆ. ಜೀವ ಇದ್ದರೆ ಜೀವನ. ಇಂದು ಅನೇಕರು ಗಾಬರಿ, ಆತಂಕದಲ್ಲಿ ಬದುಕುತ್ತಿದ್ದಾರೆ. ಕೊರೋನಾ ಆರಂಭದ ದಿನಗಳಲ್ಲಿ ನಾವು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ವನ್ನು ಕೊಟ್ಟೆವು. ಕೇವಲ ನಾಲ್ಕು ಗಂಟೆ ಅವಕಾಶ ನೀಡಿ ಲಾಕ್ ಡೌನ್ ಹೇರಿದರೂ ಕೂಡ 124 ದಿನವಾದರೂ ನಾವು ಸಹಕಾರ ನೀಡುತ್ತಲೇ ಇದ್ದೇವೆ. ಜನರ ಜೀವನ ಉಳಿಸಲು,ಎಲ್ಲ ರೀತಿಯ ಸಹಕಾರ ನೀಡಿ ಸರ್ಕಾರದ ಜತೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ. ಆದರೆ ಕೊರೋನಾ ವಿಚಾರದಲ್ಲಿ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಕ್ಕೆ ನಾವು ಬೆಂಬಲ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ಏನಾಗಿದೆ ಕರ್ನಾಟಕದಲ್ಲಿ ಏನಾಗಿದೆ ಎಂದು ನಾನು ಹಾಗೂ ನಮ್ಮ ವಿರೋಧ ಪಕ್ದ ನಾಯಕರಾದ ಸಿದ್ದರಾಮಯ್ಯನವರು ಜನರ ಮುಂದೆ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

SCROLL FOR NEXT