ರಾಜಕೀಯ

ಸಿರಾ ಕ್ಷೇತ್ರದ ಶಾಸಕ ನಿಧನ: ಉಪ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಮೂರೂ ಪಕ್ಷಗಳು 

Sumana Upadhyaya

ಬೆಂಗಳೂರು: ತುಮಕೂರಿನ ಸಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ ನಿಧನ ನಂತರ ಖಾಲಿಯಾಗಿರುವ ಶಾಸಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಈಗಾಗಲೇ ಮೂರೂ ಪಕ್ಷಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. 

ಮೂರೂ ಪಕ್ಷಗಳ ನಾಯಕರು ಸಿರಾದ ಸ್ಥಳೀಯ ನಾಯಕರನ್ನು ಅವರ ನಿವಾಸಗಳಲ್ಲಿ ಭೇಟಿ ಮಾಡಿ ಚುನಾವಣೆಯ ಸಿದ್ದತೆ ಬಗ್ಗೆ ಮಾತನಾಡುತ್ತಿದ್ದಾರೆ. ಮೃತ ಶಾಸಕ ಸತ್ಯನಾರಾಯಣ ಅವರ ಪುತ್ರ ಬಿ ಎಸ್ ಸತ್ಯ ಪ್ರಕಾಶ್ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾಗಿದ್ದರು. ಅವರನ್ನು ನಿಲ್ಲಿಸಲು ಜೆಡಿಎಸ್ ಮುಂದಾಗಿದ್ದು ಕಾಂಗ್ರೆಸ್ ನಿಂದ ಮಾಜಿ ಸಚಿವ ಟಿ ಬಿ ಜಯಚಂದ್ರ ಅವರು ಪ್ರಬಲ ಸ್ಪರ್ಧಿಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ 17 ಸಾವಿರಕ್ಕೂ ಕಡಿಮೆ ಮತ ಗಳಿಸಿರುವ ಎಸ್ ಆರ್ ಗೌಡ ಅವರನ್ನೇ ಈ ಬಾರಿ ಕೂಡ ನಿಲ್ಲಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಉಪ ಚುನಾವಣೆ ಆಡಳಿತಾರೂಢ ಪಕ್ಷದ ಪರವಾಗಿರುತ್ತದೆ ಎಂಬುದು ಬಿಜೆಪಿಯ ಲೆಕ್ಕಾಚಾರ. 

ಕಳೆದ ವಾರ ಉಪ ಮುಖ್ಯಮಂತ್ರಿ ಸಿ ಎನ್ ಅಶ್ವಥ ನಾರಾಯಣ ಮತ್ತು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸತ್ಯನಾರಾಯಣ ಅವರ ಮನೆಗೆ ಭೇಟಿ ನೀಡಿ ಕುಟುಂಬದವರನ್ನು ಸಂತೈಸಿದ್ದಾರೆ. ಹಳೆ ಮೈಸೂರು ಮತ್ತು ತುಮಕೂರು ಭಾಗಗಳಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ಚಿಂತಿಸುತ್ತಿರುವ ಬಿಜೆಪಿಗೆ ಇದು ಮಹತ್ವವಾಗಿದೆ. 

SCROLL FOR NEXT