ರಾಜಕೀಯ

ಬೆಂಗಳೂರು ಗಲಭೆ ಪ್ರಕರಣದ ತನಿಖೆಯ ಹಾದಿತಪ್ಪಿಸುತ್ತಿದೆ ಬಿಜೆಪಿ: ಸಿದ್ದರಾಮಯ್ಯ

Manjula VN

ಬೆಂಗಳೂರು: ಒಬ್ಬೊಬ್ಬ ಬಿಜೆಪಿ ಶಾಸಕರು ಭಿನ್ನ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಮೂಲಕ ಬೆಂಗಳೂರು ಗಲಭೆ ಪ್ರಕರಣದ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಗಲಭೆ ಪ್ರಕರಣ ಸಂಬಂಧ ಆರಂಭದಲ್ಲಿ ಎಸ್'ಡಿಪಿಐ ವಿರುದ್ಧ ಆರೋಪ ಮಾಡಿದ್ದರು. ಬಳಿಕ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದರು. ಇದೀಗ ಉಗ್ರ ಸಂಘಟನೆಯ ನಂಟು ಕಲ್ಪಿಸುತ್ತಿದ್ದಾರೆ. ಈ ಮೂಲಕ ಏನನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. 

ತಪ್ಪಿತಸ್ಥರನ್ನು ಕಂಡು ಹಿಡಿಯುವ ಬದಲು ಬಿಜೆಪಿ ನಾಯಕರು ಕಾಂಗ್ರೆಸ್ ನ್ನು ಗುರಿ ಮಾಡಲು ಯತ್ನಿಸುತ್ತಿದ್ದಾರೆ. ಯಾವುದೇ ಸಂಕಷ್ಟ ಎದುರಾದರೂ ಎಲ್ಲದರಲ್ಲೂ ರಾಜಕೀಯವನ್ನು ನೋಡುತ್ತಾರೆ. ಬಿಜೆಪಿಯನ್ನು ಸ್ಪಷ್ಟವಾಗಿ ಎರಡು ಬಣಗಳಾಗಿ ವಿಂಗಡಿಸಲಾಗಿದೆ. ಬಿಎಸ್ ಯಡಿಯೂರಪ್ಪ ಸರ್ಕಾರ ಉರುಳಿಸಲು ಕಾವಲ್ ಬೈರಸಂದ್ರ ಘಟನೆಯ ಲಾಭ ಪಡೆಯಲು ಆರ್‌ಎಸ್‌ಎಸ್‌ಗೆ ಹತ್ತಿರವಾದವರು ಯತ್ನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು, 

ಈ ಘಟನೆ ಬಿಜೆಪಿಯ ಪ್ರಕಾರ ಪೂರ್ವ ಯೋಜಿತವಾಗಿದ್ದರೆ, ಇದು ಗುಪ್ತಚರ ಇಲಾಖೆಯ ಗಮನಕ್ಕೇಕೆ ಬರಲಿಲ್ಲ? ನವೀನ್ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

SCROLL FOR NEXT