ರಾಜಕೀಯ

ಸತತ ಸೋಲುಗಳಿಂದ ಕಾಂಗ್ರೆಸ್ ಭ್ರಮನಿರಸನ: ಹಿಂದುತ್ವ ಸಿದ್ಧಾಂತಕ್ಕೆ ಮೊರೆ: ಡಿಕೆಶಿ ಟೆಸ್ಟ್ ಡೈವ್?

Shilpa D

ಬೆಂಗಳೂರು: ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದ ಅವರ ಹಿಂದುತ್ವದ ಮೇಲೆ ನಂಬಿಕೆಯಿರಿಸಿದೆಯೇ ಹೊರತು, ಬಿಜೆಪಿಯ ವೀರಸಾವರ್ಕರ್ ಪ್ರತಿಪಾದಿಸಿರುವ ಹಿಂದತ್ವವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶಿವಕುಮಾರ್ ಬಾಯಿ ತಪ್ಪಿ ಹೇಳಿದರೋ ಅಥವಾ ಉದ್ದೇಶಪೂರ್ವಕವಾಗಿ ಹೇಳಿದರೊ ತಿಳಿಯದು, ಆದರೆ ಡಿಕೆಶಿ ಹೇಳಿಕೆ ಮಾತ್ರ ಕಾಂಗ್ರೆಸ್ ನಾಯಕರಲ್ಲಿ ತಳಮಳ ಸೃಷ್ಟಿಸಿದೆ, ಎರಡು ಸಿದ್ದಾಂತಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಲು ಪರದಾಡುತ್ತಿದ್ದಾರೆ.

ಚುನಾವಣೆ ಸೋಲುಗಳಿಂದ ಭ್ರಮನಿರಸನಗೊಂಡಿರುವ ಕಾಂಗ್ರೆಸ್ ನಾಯಕರು ಹಿಂದುತ್ವದ ಮೊರೆ ಹೋಗುತ್ತಿದ್ದಾರೆ, ಅವರಿಗೆ ಹಿಂದೂಗಳ ಮತ ಅತ್ಯವಶ್ಯಕವಾಗಿದೆ, ಹೀಗಾಗಿ ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ಮತದಾರರು ಮತ ಹಾಕುವುದು ಸಂಪೂರ್ಣವಾಗಿ ಹಿಂದುತ್ವಕ್ಕೆ ಬದ್ಧರಾಗಿರುವವರಿಗೆ ಹೊರತು ಹೇಳಿಕೆಗಳನ್ನು ನೀಡುವವರಿಗಲ್ಲ ಎಂದು ಹೇಳಿದ್ದಾರೆ. 

ಇನ್ನೂ ಶಿವಕುಮಾರ್ ಹೇಳಿಕೆಯಿಂದ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿರುವ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ, ಅವರು ಅರ್ಥೈಸಿದ್ದು ಹಿಂದೂ ಧರ್ಮವನ್ನೇ ಹೊರತು ಹಿಂದುತ್ವವನ್ನಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹಿಂದೂತ್ವವು ಹಿಂದೂ ಧರ್ಮದ ವಿಸ್ತಾರವನ್ನು ಸರಿಹೊಂದಿಸಲಾಗದ ಪದವಾಗಿದೆ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.

ಹಿಂದುತ್ವವು ಸಂಕುಚಿತ ವ್ಯಾಖ್ಯಾನವಾಗಿದೆ. ಅವರು ಹೇಳಿಕೆ ನೀಡಿದಾಗ ನಾನು ಶಿವಕುಮಾರ್ ಅವರ ಪಕ್ಕದಲ್ಲಿ ನಿಂತಿದ್ದೆ, ಮತ್ತು ನಾನು ಅದನ್ನು ಪಾಯಿಂಟ್ ಮಾಡಿ ಅವರಿಗೆ ತೋರಿಸಿದೆ ಎಂದು ಕಾಂಗ್ರೆಸ್ ಮಾಧ್ಯಮ ಘಟಕದ ಮುಖ್ಯಸ್ಥ ಬಿ.ಎಲ್ ಶಂಕರ್ ತಿಳಿಸಿದ್ದಾರೆ.

ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯ ದೇಶವನ್ನು ಹಿಂದುತ್ವವು ಒಳಗೊಳ್ಳಲು ಸಾಧ್ಯವಿಲ್ಲ, ಭಾರತಕ್ಕೆ ಶ್ರೀಮಂತ ಇತಿಹಾಸ ಮತ್ತು ಪರಂಪರೆಯಿದೆ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದರು ಚಿಕಾಗೊ ಸಮಾವೇಶದಲ್ಲಿ  ಹಿಂದೂ ಧರ್ಮವು ಸಾರ್ವತ್ರಿಕ ಭ್ರಾತೃತ್ವವನ್ನು ಬೋಧಿಸುತ್ತದೆ ಎಂದು ಹೇಳಿದರು, ಮಹಾತ್ಮ ಗಾಂಧಿ ಎಲ್ಲಾ ಧರ್ಮಗಳ ಪ್ರೀತಿ ಮತ್ತು ಸ್ವೀಕಾರವನ್ನು ನಂಬಿದ್ದರು. ಆದರೆ ಸಾವರ್ಕರ್ ಅವರ ಹಿಂದುತ್ವವು ಸಂಕುಚಿತ ಮತ್ತು ಪ್ರತ್ಯೇಕವಾಗಿದ್ದು,  ‘ದ್ವೇಷ’ ಎಂದು ಬೋಧಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಈಶ್ವರ್ ಖಂಡ್ರೆ ವ್ಯಾಖ್ಯಾನಿಸಿದ್ದಾರೆ,

ಕಾಂಗ್ರೆಸ್ ಕೇವಲ ಜಾತ್ಯತೀತ ಪಕ್ಷವಾಗಿದ್ದು, ಅದು ಹಿಂದುತ್ವವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ, ಆದರೆ ಇದೆಲ್ಲದರ ಗೊಂದಲಗಳ ಹೊರತಾಗಿಯೂ ಡಿಕೆ  ಶಿವಕುಮಾರ್ ಅಧಿಕೃತವಾಗಿ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ.

SCROLL FOR NEXT