ರಾಜಕೀಯ

ಕುರುಬ ಸಮುದಾಯದ ಏಳಿಗೆಗೆ ಸಹಾಯ ಮಾಡಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಶ್ವನಾಥ್ ಮನವಿ

Manjula VN

ಮೈಸೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಿದೆ. ಈಗಲಾದರೂ ನಮ್ಮ ಈ ಹೋರಾಟಕ್ಕೆ ಬನ್ನಿ. ನಿಮ್ಮ ಸಹಕಾರ ಸಮುದಾಯಕ್ಕೆ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮುಕ್ತ ಆಹ್ವಾನ ನೀಡಿದರು. 

ಈ ಸಮಯದಲ್ಲಿ ಸಮುದಾಯದ ಏಳಿಗೆಗೆ ಸಹಾಯ ಮಾಡಿ. ನಿಮ್ಮ ನೇತೃತ್ವದಲ್ಲಿಯೇ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ನೀವು ಬರಲು ಸಿದ್ಧರಿದ್ದೀರಾ? ಹೆಚ್.ಎಂ.ರೇವಣ್ಣ, ಕೆ.ಎಸ್.ಈಶ್ವರಪ್ಪ ಮತ್ತು ಸ್ವಾಮೀಜಿಗಳೂ ಕೂಡ ಈ ಹೋರಾಟಕ್ಕೆ ಬರುವಂತೆ ಕರೆದಿದ್ದಾರೆ. ನಿಮ್ಮ ನಾಯಕತ್ವದಲ್ಲಿಯೇ ನಾವು ಹೋಗುತ್ತೇವೆ. ನೇತೃತ್ವವಹಿಸಿ ಬನ್ನಿ. ಹಳೆಯದನ್ನು ಮರೆತು ಮುಂದೆ ಸಾಗೋಣ ಎಂದು ಹೇಳಿದ್ದಾರೆ. 

ನಮ್ಮ ಸಮುದಾಯ ತನು, ಮನ, ಧನ ನೀಡಿದೆ. ಅಂತಹ ಸಮುದಾಯಕ್ಕೆ ಹೋರಾಟ ಅಗತ್ಯವೇಕಿದೆ ಅಂತೀರಲ್ಲ? ಬಹುಶಃ ನೀವು ಹೋರಾಟ ಮಾಡಿಲ್ಲ ಅನ್ನಿಸುತ್ತದೆ. ನಿಮ್ಮ ಮಾರ್ಗದರ್ಶನ ದೊರಕಿದರೆ ಈ ಹೋರಾಟ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು. ಆದರೆ, ಹೋರಾಟವೇ ಬೇಡ ಅನ್ನುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಮೀಸಲಾತಿ ವಿಚಾರದಲ್ಲಿ ಹೋರಾಟ ಅಗತ್ಯವಿದೆ. ಎಸ್'ಟಿನ ಯಾರೋ ಹೈಜಾಕ್ ಮಾಡುತ್ತಿದ್ದಾರೆ ಅಂತೀರಾ? ಹೋರಾಟಕ್ಕೆ ಬರುವುದಿಲ್ಲ ಅಂತೀರ. ಒಂದು ದೊಡ್ಡ ಸಮುದಾಯ ಹೈಜಾಕ್ ಮಾಡಲು ಆಗುವುದಿಲ್ಲ. ಕನಕ ಗೋಪುರ ಬಿದ್ದಾಗ, ಮಠ ಕಟ್ಟಿದಾಗ ನೀವು ಇರಲಿಲ್ಲ. ಮಠ ಕಟ್ಟೋದು ಅಷ್ಟು ಸುಲಭವಲ್ಲ. ಕಾಗಿನೆಲೆ ಮಹಾ ಸಂಸ್ಥಾಪಕ ಅಧಅಯಕ್ಷ ನಾನೇ ಆಗಿದ್ದೇನೆ. ಆಗಲೂ ನೀವು ಬರದಿದ್ದರೂ ನಿಮ್ಮ ಹೆಸರನ್ನು ಹಾಕಿದ್ದೆವು. ಇಷ್ಟಾದರೂ ಬೆಂಬಲ ಸೂಚಿಸಬೇಕಿತ್ತು. ಹುಣಸೂರು ಉಪಚುನಾವಣೆ ವೇಳೆ ಯೋಗೇಶ್ವರ್ ಹಣ ತೆಗೆದುಕೊಂಡು ಹೋಗಿದ್ದಾರೆ ಅಂತ ಹೇಳಿದ್ದು ನಿಜ. ದೊಡ್ಡ ಮೊತ್ತ ಅಂದ್ರೆ ರೂ.5 ಲಕ್ಷ ಹಣ. 

ನನ್ನ ಪಾಲಿಗೆ 5 ಲಕ್ಷ ದೊಡ್ಡ ಮೊತ್ತವೇ ಆಗಿದೆ. ತೆರಿಗೆ ಲೆಕ್ಕದಲ್ಲೂ 5 ಲಕ್ಷ ದೊಡ್ಡ ಮೊತ್ತವೇ. ನೀವು ಸಿಎಂ ಆಗಿದ್ದವರು. ಹಾಗಾಗಿ ನಿಮಗೆ ಕೋಟ್ಯಾಂತರ ರುಪಾಯಿ ದೊಡ್ಡ ಮೊತ್ತ ಿರಬೇಕು. ನನಗೆ ಇದೇ ದೊಡ್ಡ ಮೊತ್ತ. ಅದನ್ನು ಯೋಗೇಶ್ವರ್ ಹಾಗೂ ಸಂತೋಷ್ ತೆಗೆದುಕೊಂಡು ಹೋದರು ಅಂತ ಹೇಳಿದ್ದೇನೆ ಅಷ್ಟೇ. ನೀವು ಜಿಟಿಡಿಗೆ ಹಣ ಕೊಟ್ಟಿದ್ದೇವೆ ಅಂದ್ರಲ್ಲ ಅದು ಯಾವ ಹಣ? ಅದು ಬ್ಲಾಕ್ ಮನಿಯೋ ವೈಟ್ ಮನಿಯೋ? ಎಷ್ಟು ಕೋಟಿ ಅಂತ ನೀವು ಬಹಿರಂಗಪಡಿಸಿ ಎಂದು ಸಿದ್ದರಾಮಯ್ಯ ಅವರಿಗೆ ಮರು ಸವಾಲು ಹಾಕಿದರು. 

SCROLL FOR NEXT