ರಾಜಕೀಯ

ಮೊದಲ ಹಂತದ ಪಂಚಾಯತ್ ಚುನಾವಣೆಯಲ್ಲಿ 4,377 ಮಂದಿ ಅವಿರೋಧ ಆಯ್ಕೆ, ಹರಾಜು ನಡೆದಿರುವುದು ಸ್ಪಷ್ಟ

Lingaraj Badiger

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಂಚಾಯತ್ ಸ್ಥಾನಗಳನ್ನು ಹರಾಜು ಹಾಕುತ್ತಿರುವುದು ಗಣನೀಯವಾಗಿ ಹೆಚ್ಚಳವಾಗಿದ್ದು, ಇದಕ್ಕೆ ರಾಜ್ಯ ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶಗಳು ಪುಷ್ಟಿ ನೀಡಿದೆ.

ಇಡೀ ದೇಶದಲ್ಲಿಯೇ ಅತ್ಯಂತ ಕೆಟ್ಟ ಪರಂಪರೆಗೆ ನಾಂದಿ ಹಾಡಿರುವ ಈ ಪಿಡುಗು ರಾಜ್ಯದಲ್ಲಿ ವ್ಯಾಪಕವಾಗಿರುವುದು ಕಂಡು ಬಂದಿದೆ. ಇದೇ 22 ರಂದು ನಡೆಯುಲಿರುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 4,377 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಇದರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪಂಚಾಯತ್ ಸ್ಥಾನಗಳು ಹರಾಜಿಗೆ ಒಳಗಾಗಿರುವ ಸಾಧ್ಯತೆಗಳಿವೆ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.

ಪಂಚಾಯತ್ ಸ್ಥಾನಗಳನ್ನು ಹರಾಜು ಹಾಕುವುದನ್ನು ತಡೆಯಲು ಆಯೋಗ ವ್ಯಾಪಕ ಕ್ರಮಗಳನ್ನು ಕೈಗೊಂಡಿತ್ತು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಆದೇಶ ನೀಡಿದ್ದರು.

ಈಗಾಗಲೇ 4,377 ಮಂದಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅಂತಿಮವಾಗಿ 1,17,383 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು 43,238 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 1,64,550 ನಾಮಪತ್ರ ಸಲ್ಲಿಕೆ ಆಗಿದೆ. 40,352 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. 432 ಸ್ಥಾನಗಳು ನಾಮಪತ್ರ ಸಲ್ಲಿಕೆ ಮಾಡದೆ ಖಾಲಿ ಉಳಿದಿವೆ.

ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 22ರಂದು ಮೊದಲ ಹಂತ ಹಾಗೂ ಡಿಸೆಂಬರ್ 27ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

SCROLL FOR NEXT