ರಾಜಕೀಯ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿದ ಶರತ್ ಬಚ್ಚೇಗೌಡ: ಕಾಂಗ್ರೆಸ್ ಸೇರ್ಪಡೆ ಸನ್ನಿಹಿತ?

Shilpa D

ಬೆಂಗಳೂರು: ಬಿಜೆಪಿಯಿಂದ ಹೊಸಕೋಟೆ ಉಪ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎಂಟಿಬಿ ನಾಗರಾಜ್ ವಿರುದ್ಧ ಗೆಲುವು ಸಾಧಿಸಿದ ಶರತ್ ಬಚ್ಚೇಗೌಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮತ್ತೆ ಭೇಟಿಯಾಗಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾಗಿ ಶರತ್ ಬಚ್ಚೇಗೌಡ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡರೇ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಚರ್ಚಿಸಲಾಯಿತು ಎಂದು ಶರತ್ ತಿಳಿಸಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಉತ್ತರಿಸಿದ ಶರತ್ ,ನಾನು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸುತ್ತಿದ್ದೇನೆ, ನನಗೆ ಆಫರ್ ಗಳು ಬರುತ್ತಿವೆ ಎಂದ ಅವರು ಯಾವಾಗ ಕಾಂಗ್ರೆಸ್ ಸೇರುತ್ತೇನೆ ಎಂಬ ದಿನಾಂಕ ತಿಳಿಸಿಲ್ಲ. ತಮ್ಮ ತಂದೆ ಬಚ್ಚೇಗೌಡ ಜೆಡಿಎಸ್ ನಲ್ಲಿ ಸುದೀರ್ಘ ಸಮಯ ಇದ್ದರು. ಹೀಗಾಗಿ ನಾನು ಮತ್ತೆ ಜೆಡಿಎಸ್ ಸೇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ನಿಗದಿ ಆಗಿತ್ತು. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಂದೂಡಲಾಗಿತ್ತು. ಆದರೂ ಕಾಂಗ್ರೆಸ್ ಪಕ್ಷದ ಪರವಾಗಿ ಶರತ್ ಬಚ್ಚೇಗೌಡ ಅವರು ಹೊಸಕೋಟೆ ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೊಸಕೋಟೆ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ಅವರ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸುವ ಮೂಲಕ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದರು. ಅದಾದ ಬಳಿಕ ಬಿಜೆಪಿ ಸೇರ್ಪಡೆ ಪ್ರಯತ್ನವನ್ನೂ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಹಲವು ಬಾರಿ ಮಾಡಿದ್ದರು ಎನ್ನಲಾಗಿದೆ. ಅದಕ್ಕೆ ಬಿಜೆಪಿಯಲ್ಲಿನ ಬೆಂಗಳೂರಿನ ಕೆಲವು ಹಿರಿಯ ಒಕ್ಕಲಿಗ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.

SCROLL FOR NEXT