ರಾಜಕೀಯ

ಗ್ರಾಮ ಪಂಚಾಯತ್ ಚುನಾವಣೆ: ಮೊದಲ ಹಂತದಲ್ಲಿ ಸರಾಸರಿ ಶೇ.80ರಷ್ಟು ಮತದಾನ, ಉತ್ಸಾಹದಿಂದ ಮತಗಟ್ಟೆಗೆ ಬಂದ ಗ್ರಾಮಸ್ಥರು!

Sumana Upadhyaya

ಬೆಂಗಳೂರು: ಕೋವಿಡ್-19 ಕರಿ ನೆರಳಿನ ಮಧ್ಯೆ ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತದಲ್ಲಿ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆದಿದ್ದು ಕರ್ನಾಟಕದ ಅರ್ಧದಷ್ಟು ಮಂದಿ ಮತ ಚಲಾಯಿಸಿದ್ದಾರೆ.

ನಿನ್ನೆಯ ಮತದಾನದಲ್ಲಿ ಒಟ್ಟಾರೆ ಶೇಕಡಾ 80ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಕೆಲವು ಜಿಲ್ಲೆಗಳಲ್ಲಿ ಶೇಕಡಾ 85ರಷ್ಟು ಮತದಾನವಾಗಿದೆ. ಅದು ಈ ಹಿಂದಿನ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಯ ಮತದಾನಕ್ಕಿಂತ ಹೆಚ್ಚಾಗಿದೆ.

ಕೆಲವು ಮತಗಟ್ಟೆಗಳಲ್ಲಿ ಕೆಲ ಕಾಲ ಗೊಂದಲದ ವಾತಾವರಣ, ಮತದಾನ ಸ್ಥಗಿತ ಬಿಟ್ಟರೆ ಬಹುತೇಕ ನಿನ್ನೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಸಾಗಿತು. ಎರಡನೇ ಹಂತದ ಮತದಾನ ಇದೇ 27ರಂದು ನಡೆಯಲಿದ್ದು ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಬಸವರಾಜು, 2015ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸುಮಾರು ಶೇಕಡಾ 80ರಷ್ಟು ಮತದಾನವಾಗಿತ್ತು. ಈ ಬಾರಿ ಅದಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಕೋಲಾರದಂತಹ ಕೆಲವು ಸ್ಥಳಗಳಲ್ಲಿ ಶೇಕಡಾ 90ಕ್ಕೆ ಹತ್ತಿರ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಮತದಾನವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕಿನಲ್ಲಿ ಶೇಕಡಾ 91ಕ್ಕಿಂತ ಹೆಚ್ಚು ಮತದಾನವಾಗಿದೆ. ಧಾರವಾಡ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸುಮಾರು ಶೇಕಡಾ 80ರಷ್ಟು ಮತದಾನವಾಗಿದೆ. ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದಾದರೂ ಕೊರೋನಾದಿಂದ ಹೆಚ್ಚು ಮತದಾರರು ಮತಗಟ್ಟೆಗೆ ಬರಲಿಕ್ಕಿಲ್ಲ ಎಂದು ಭಾವಿಸಿದ್ದೆವು, ಆದರೆ ನಮ್ಮ ಊಹೆ ತಪ್ಪಾಗಿದೆ, ನಿರೀಕ್ಷೆಗಿಂತ ಹೆಚ್ಚು ಮತದಾನವಾಗಿದೆ ಎಂದು ಹೇಳಿದರು.

SCROLL FOR NEXT