ರಾಜಕೀಯ

ರಾತ್ರಿ ಕರ್ಫ್ಯೂ ನಿರ್ಧಾರ ಸುಧಾಕರ ಅವರದ್ದು, ಅವರಿಗೇನಾದರೂ ಪರಿಜ್ಞಾನ ಇದೆಯೇ: ಡಿಕೆ ಶಿವಕುಮಾರ್ ತರಾಟೆ

Nagaraja AB

ಬೆಂಗಳೂರು: ರಾತ್ರಿ ಕರ್ಫ್ಯೂ ತೀರ್ಮಾನ ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದಲ್ಲ, ಸಚಿವ ಸುಧಾಕರ್ ಅವರದು. ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚ ನಮ್ಮ ರಾಜ್ಯ ಹಾಗೂ ಈ ನಗರವನ್ನು ಗಮನಿಸುತ್ತಿದೆ. ಹಗಲಲ್ಲಿ ಸೋಂಕು ಬರಲ್ಲ, ರಾತ್ರಿ ವೇಳೆ ಸೋಂಕು ಬರುತ್ತದೆಯೇ? ಪರಿಜ್ಞಾನ ಇರುವವರು ಯಾರೂ ಇಂತಹ ನಿರ್ಧಾರಕ್ಕೆ ಬರುವುದಿಲ್ಲ. ರಾತ್ರಿ 11 ಗಂಟೆ ಮೇಲೆ ಯಾರು ಓಡಾಡುತ್ತಾರೆ? ಇಡೀ ವರ್ಷ ಜನ ನರಳಿದ್ದಾರೆ, ಸುಧಾಕರ್ ಯಾರ ಅಭಿಪ್ರಾಯವನ್ನೂ ಪಡೆಯದೆ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದು ಯಾಕೆ? ಇವರಿಗೆ ರಾತ್ರಿ ವೇಳೆ ಕರ್ಫ್ಯೂ ಮಾಡಿದರೆ ಸೋಂಕು ಬರುವುದಿಲ್ಲ ಎಂದು ಸಲಹೆ ನೀಡಿದವರ ಫೋಟೋ ಕೊಟ್ಟರೆ ಮನೆಯಲ್ಲಿಟ್ಟು ಕೊಳ್ಳುತ್ತೇವೆ ಎಂದು ಲೇವಡಿ ಮಾಡಿದರು. 

ಇದು ಸಾಮಾನ್ಯ ಜ್ಞಾನದ ವಿಚಾರ. ಇದರಲ್ಲಿ ಯಾವುದೇ ವಿಜ್ಞಾನ ಅಡಗಿಲ್ಲ. ರಸ್ತೆ, ಮಾರುಕಟ್ಟೆ ಸೇರಿದಂತೆ ಹಗಲೆಲ್ಲಾ ಜನ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಎಲ್ಲೆಲ್ಲಿ ಯಾವ ರೀತಿ ನಿಯಂತ್ರಣ ಮಾಡಬೇಕೋ ಆ ರೀತಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಜನರಿಗೆ ಔಷಧಿ ಒದಗಿಸಬೇಕು, ನಷ್ಟ ಅನುಭವಿಸಿರುವವರಿಗೆ ಪರಿಹಾರ ನೀಡಬೇಕು ಎಂದು ಹೇಳಿದ ಶಿವಕುಮಾರ್,  ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವವರಿಗೆ ತೆರಿಗೆ ವಿನಾಯಿತಿ ಏನಾದರೂ ಕೊಟ್ಟಿದ್ದಾರಾ? ಉದ್ಯೋಗ ಭತ್ಯೆ ನೀಡಿದ್ದಾರಾ? ಬ್ಯಾಂಕ್ ಗಳಿಗೆ ಸೂಚನೆ ನೀಡಿ ಸಾಲ ಮನ್ನಾ ಮಾಡದಿದ್ದರೂ ಬಡ್ಡಿ ಮನ್ನಾ ಮಾಡಿದ್ದಾರಾ? ಅರ್ಧಕ್ಕರ್ಧ ರೆಸ್ಟೋರೆಂಟ್ ಗಳು ಬಾಗಿಲು ತೆರೆಯಲು ಆಗಿಲ್ಲ ಎಂದು ಸರ್ಕಾರವನ್ನು ಶಿವಕುಮಾರ್  ಪ್ರಶ್ನಿಸಿದರು.

ತಮಗೆ ಪ್ರಚಾರ ಸಿಗುತ್ತದೆ ಅಂತಾ ಅವರಿಗೆ ಇಷ್ಟಬಂದ ಹಾಗೆ ತೀರ್ಮಾನ ಮಾಡಿದರೆ ಕೇಳಲು ಸಾಧ್ಯವೇ? ಈ ಸರ್ಕಾರ ಬಂದ ಮೇಲೆ ಎಷ್ಟು ನಿರ್ಧಾರಗಳಲ್ಲಿ ಯೂ ಟರ್ನ್ ಹೊಡೆದಿದೆ ಎಂದು ಲೆಕ್ಕ ಹಾಕಿ. ಸರ್ಕಾರ ಯುವಕರ ಭಾವನೆ ಮತ್ತು ಆಕ್ರೋಶಕ್ಕೆ ಸ್ಪಂದಿಸಿದೆ. ನಾವು ಕೂಡ ಅವರ ಭಾವನೆಗೆ ಸ್ಪಂದಿಸಿದ್ದು,ಅದು ನಮ್ಮ ಕರ್ತವ್ಯ. ನಮ್ಮ ಯುವಕರಿಗೆ ಈ ಸಚಿವರಿಗಿಂತ ಉತ್ತಮ ಪರಿಜ್ಞಾನ ಇದೆ. ಈ ರಾಜ್ಯದ ಜನರಿಂದ ನಮ್ಮ ರಾಜ್ಯಕ್ಕೆ ಹೆಸರು ಬಂದಿದೆಯೇ ಹೊರತು ಇವರಿಂದ ಅಲ್ಲ ಎಂದರು. 

ಸಚಿವರ ಹೇಳಿಕೆಗೆ ತಿರುಗೇಟು ನೀಡಿದ ಅವರು ,ಯಡಿಯೂರಪ್ಪನವರು ಬೇಲ್ ಮೇಲೆ ಬಂದಿದ್ದನ್ನು ನೋಡಿದ್ದೇವೆ. ದೊಡ್ಡ ನಾಯಕರು ಬಂದಿದ್ದನ್ನು ನೋಡಿದ್ದೇವೆ. ಇದಕ್ಕೆಲ್ಲ ಕಾಲ ಉತ್ತರ ಕೊಡುತ್ತದೆ ಎಂದರು. ರಾಜ್ಯದಿಂದ ಈ ಮಾಹಾಮಾರಿ ತೊಲಗಿ, ಜನರಿಗೆ ನೆಮ್ಮದಿ ಶಾಂತಿ ಸಿಗಲಿ ಎಂದು ನಾನು ವೈಕುಂಠ ಏಕಾದಶಿ ದಿನ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.

SCROLL FOR NEXT