ರಾಜಕೀಯ

ಖರ್ಗೆ ಮುಖ್ಯಮಂತ್ರಿಯಾಗುವುದನ್ನು ನಾನೆಂದೂ ತಡೆದಿಲ್ಲ: ಸಿದ್ದರಾಮಯ್ಯ

Manjula VN

ಮೈಸೂರು: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ಮುಖ್ಯಮಂತ್ರಿಯಾಗುವುದನ್ನು ನಾನೆಂದಿಗೂ ತಡೆದಿಲ್ಲ. ಖರ್ಗೆಯವರ ಹೆಸರು ತಿರಸ್ಕರಿಸಿದವರು ಯಾರು ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿ ಸವಾಲು ಹಾಕಿದ್ದಾರೆ. 

ಮೈತ್ರಿ ಸರ್ಕಾರ ರಚನೆ ವೇಳೆ ಮುಖ್ಯಮಂತ್ರಿಯಾಗಲು ಒಪ್ಪಿದ್ದ ಹಿರಿಯ ಕಾಂಗ್ರೆಸ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಹೈಕಮಾಂಡ್'ಗೆ ತಿಳಿಸದಂತೆ ನನ್ನ ಕೈ ಹಿಡಿದವರಾರು ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಹೇಳಿಕೆ ಬ್ಗಗೆ ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಈ ರೀತಿ ಉತ್ತರಿಸಿದರು. 

ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುವ ಖರ್ಗೆಯವರ ಹೆಸರನ್ನು ತಿರಸ್ಕರಿಸಿದ್ದು ನಾನಂತೂ ಅಲ್ಲ, ಖರ್ಗೆಯವರ ಹೆಸರನ್ನು ಯಾರು ತಿರಸ್ಕಾರ ಮಾಡಿದರು ಎಂದು ಅವರ ಹೆಸರನ್ನು ಹೇಳಲಿ ಎಂದು ಆಗ್ರಹಿಸಿದರು. 

ಸಿದ್ದರಾಮಯ್ಯ ಪಕ್ಷ ಕಟ್ಟಿಲ್ಲ ಎಂಬ ಗೌಡರ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ ಅವರು, ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ ಎಂದು ಪ್ರಶ್ನಿಸಿದರು. 

ದೇವೇಗೌಡರು ಪಾಪ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಎಂದುಕೊಂಡಿದ್ದೀನಿ. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದವರು ಯಾರು? 6 ವರ್ಷ ಜೆಡಿಎಸ್ ಅಧ್ಯಕ್ಷನಾಗಿದ್ದು ನಾನು ಎಂದು ತಿಳಿಸಿದ್ದಾರೆ. 

ಸ್ವಗ್ರಾಮದಲ್ಲಿ ನಾಟಿಕೋಳಿ ಸಾರು, ಮುದ್ದೆ ಸವಿದ ಸಿದ್ದರಾಮಯ್ಯ
ತಮ್ಮ ಸ್ವಗ್ರಾಮವಾದ ಮೈಸೂರು ತಾಲೂಕಿನ ಸಿದ್ದರಾಮನಹುಂಡಿಗೆ ತೆರಳಿದ ಸಿದ್ದರಾಮಯ್ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಿದರು. ಬಳಿಕ ಕೆಲ ಕಾಲ ಗ್ರಾಮದಲ್ಲಿ ರಿಲ್ಯಾಕ್ಸ್ ಆಗಿ ಸಮಯ ಕಳೆದರು. 

ಬಾಲ್ಯದ ಗೆಳೆಯ ಕೆಂಪೀರಯ್ಯ ಅವರ ಮನೆಯಲ್ಲಿ ಮುದ್ದೆ, ನಾಟಿಕೋಳಿ ಸಾರು ಸವಿದರು. ಈ ವೇಳೆ ಮನೆಯ ಹೊರಗಡೆ ಮಹಿಳೆಯರು ಸೋಬಾನೆ ಪದ ಹಾಡಿದರು. ಹಾಡು ಹೇಳಿದ ಮಹಿಳೆಯರಿಗೆ ಸಿದ್ದರಾಮಯ್ಯ ಅವರು ರೂ.1,500 ನೀಡಿದರು. 

SCROLL FOR NEXT