ರಾಜಕೀಯ

ಸಂಪುಟ ವಿಸ್ತರಣೆ: ಯಡಿಯೂರಪ್ಪ ಮೇಲೆ ವಿಶ್ವಾಸ ಇಟ್ಟ ಎಂಟಿಬಿ, ವಿಶ್ವನಾಥ್

Manjula VN

ಬೆಂಗಳೂರು: ಉಪಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ ಕಾಂಗ್ರೆಸ್ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು, ಸಚಿವ ಸಂಪುಟ ಸ್ಥಾನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನೊಂದಿಗೆ 38 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಜನರಿಗೆ ಸೇವೆ ಸಲ್ಲಿಸಲು, ಜನಪರವಾಗಿ ಕೆಲಸ ಮಾಡಲು ನನಗೆ ಸರ್ಕಾರದಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಅವರು ನನಗೆ ಯಾವ ಸ್ಥಾನ ನೀಡುತ್ತಾರೆಂಬುದು ನನಗೆ ತಿಳಿದಿಲ್ಲ. ಅದರ ಬಗ್ಗೆ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ನನಗೆ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದೆ. ಹೇಳಿದಂತೆ ಅವರು ಮಾಡುತ್ತಾರೆಂದು ಎಂದು ಎಂಟಿಬಿ ನಾಗರಾಜ್ ಅವರು ಹೇಳಿದ್ದಾರೆ. 

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಿಂದ ಹೊರ ಬಂದ ನಾಗರಾಜ್ ಹಾಗೂ ವಿಶ್ವನಾಥ್ ಅವರು, ಸರ್ಕಾರ ಅಸ್ಥಿರಗೊಂಡ ಬಳಿಕ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. 

ಚುನಾವಣೆಯಲ್ಲಿ ನಾನು ಸೋಲು ಕಂಡಿದ್ದಕ್ಕೆ ಜನರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಮತ ಹಾಕದ್ದಕ್ಕೆ ಅವರೇ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿಯವರು ನನ್ನನ್ನು ಸೋಲಿಸುವ ಪಣ ತೊಟ್ಟಿದ್ದರು. ನಾನು ಪಕ್ಷ ತೊರೆದಿದ್ದೇ ಸರ್ಕಾರ ಬೀಳಲು ಕಾರಣವಾಯಿತು ಎಂದು ಅವರಿಗೆ ನನ್ನ ಮೇಲೆ ಕೋಪವಿತ್ತು. ಡಿಕೆ ಶಿವಕುಮಾರ್ ಅವರು ನನ್ನ ಪ್ರತಿಸ್ಪರ್ಧಿಗೆ ಬೆಂಬಲ ನೀಡಿದ್ದರೆ. ಹೀಗಾಗಿ ನನ್ನ ಸಮುದಾಯದ ಮತಗಳನ್ನು ವಿಭಾಗಿಸಿದ್ದರು ಎಂದು ತಿಳಿಸಿದ್ದಾರೆ. 

ಇದರಂತೆ ವಿಶ್ವನಾಥ್ ಅವರು ಮಾತನಾಡಿ, ನಾನು ಸಚಿವನಾಗದಿದ್ದರೆ ಆಕಾಶ ಕಳಚಿ ಬೀಳುವುದಿಲ್ಲ. ಮಂತ್ರಿ ಮಾಡಬಹುದು ಅಂತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ. 

SCROLL FOR NEXT