ರಾಜಕೀಯ

ಪರಿಷತ್‌ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆ, ಅವಿರೋಧ ಆಯ್ಕೆ ಖಚಿತ

Lingaraj Badiger

ಬೆಂಗಳೂರು: ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರಿಂದ ತೆರವಾಗಿರುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ಅವರು ಬುಧವಾರ ನಾಮಪತ್ರ ಸಲ್ಲಿಸಿದರು.

ವಿಧಾನ ಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಕ್ಷಿ ಅವರಿಗೆ ಸಂಪುಟದ ಸಹ ಸಚಿವರು, ನಾಯಕರ ಜೊತೆ ಆಗಮಿಸಿ ಸವದಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ತೋಟಗಾರಿಕಾ ಸಚಿವ ವಿ‌.ಸೋಮಣ್ಣ, ಗೃಹ ಸಚಿವ ಬಸವರಾಜ ಬೊಮ್ಮಯಿ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ‌ ಮತ್ತಿತರರು ಉಪಸ್ಥಿತರಿದ್ದರು.

ಫೆಬ್ರವರಿ 7ರಂದು ಉಪ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ. ವಿಧಾನಸಭೆಯ ಶಾಸಕರು ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕಾಗಿ ನಡೆಯುವ ಉಪ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಉಪ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದು ಬರಲಿದೆ. ಹೀಗಾಗಿ ಲಕ್ಷ್ಮಣ ಸವದಿ ಅವಿರೋಧವಾಗಿ ಆಯ್ಕೆಯಾಗುವುಗು ಬಹುತೇಕ ಖಚಿತ ಎನ್ನಲಾಗಿದೆ.

SCROLL FOR NEXT