ರಾಜಕೀಯ

ಬಂಡಾಯ ದೂರಾಗಿಸಲು ಏಪ್ರಿಲ್'ನಲ್ಲಿ ಸಂಪುಟ ಪುನಾರಚನೆಗೆ ಯಡಿಯೂರಪ್ಪ ಚಿಂತನೆ 

Manjula VN

ಬೆಂಗಳೂರು: ಸಂಪುಟ ವಿಸ್ತರಣೆಯಿಂದ ಕೇಸರಿ ಪಾಳಯದಲ್ಲಿ ಬಂಡಾಯದ ಹೊಗೆಯಾಡುವ ಎಲ್ಲಾ ಸೂಚನೆಗಳು ಎದುರಾಗುತ್ತಿರುವ ಬೆನ್ನಲ್ಲೇ. ಬಂಡಾಯ ದೂರಾಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಶೀಘ್ರದಲ್ಲಿಯೇ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಸಂಪುಟ ವಿಸ್ತರಣೆ ಬಳಿಕ ಇದೀಗ ಯಡಿಯೂರಪ್ಪ ಅವರಿಗೆ ಯಾವ ಯಾವ ಸಚಿವರಿಗೆ ಯಾವ ಸಚಿವ ಸ್ಥಾನ ನೀಡಬೇಕು ಹಾಗೂ ರಾಜ್ಯ ಬಜೆಟ್ ಬಗ್ಗೆ ಸಾಕಷ್ಟು ತಲೆ ಬಿಸಿ ಎದುರಾಗಿದ್ದು, ಇವೆಲ್ಲಾ ಸಮಸ್ಯೆಗಳು ದೂರಾದ ಬಳಿಕ ಬಂಡಾಯದಿಂದ ದೂರ ಉಳಿಯಲು ಬಜೆಟ್ ಪೂರ್ಣಗೊಂಡ ಬಳಿಕ ಏಪ್ರಿಲ್ ತಿಂಗಳಿನಲ್ಲಿ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ. ಇದರ ಪರಿಣಾಮ ಹಾಲಿ ಸಚಿವರ ಕುರ್ಚಿಗೆ ಕಂಟಕ ಎದುರಾಗಿದ್ದು, ಹಾಲಿ ಸಚಿವರು ಕಂಗಾಲಾಗಿದ್ದಾರೆಂದು ಹೇಳಲಾಗುತ್ತಿದೆ. 

ನೂತವ ಸಚಿವರಿಗೆ ಸ್ಥಾನ ಕಲ್ಪಿಸಲು ಹಾಲಿ ಸಚಿವರನ್ನು ತೆಗೆದು ಹಾಕುವ ಅನಿವಾರ್ಯ ಎದುರಾಗಿರುವ ಹಿನ್ನೆಲೆಯಲ್ಲಿ ಹಾಲಿ ಸಚಿವರಿಗೆ ತಮ್ಮ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುವ ತಲೆನೋವು ಶುರುವಾಗಿದೆ. 

ಪ್ರಸ್ತುತ ಸಂಪುಟ ವಿಸ್ತರಣೆಯಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಭಾಗದ ನಾಯಕರಿಗೆ ಹೆಚ್ಚಿನ ಸ್ಥಾನಗಳು ದೊರಕಿದ್ದು, ಇದರ ಪರಿಣಾಮ ಇತರೆ 12 ಜಿಲ್ಲೆಗಳಿಗೆ ಯಾವುದೇ ಪ್ರತಿನಿಧಿಗಳು ಇಲ್ಲದಂತಾಗಿದೆ. ಕರಾವಾಳಿ ಭಾಗದಿಂದ ಯಾವುದೇ ಪ್ರತಿನಿಧಿಗಳು ಇಲ್ಲದಿರುವುದರಿಂದ ಈ ಬಗ್ಗೆ ಇದೀಗ ಕಳವಳಗಳು ಹೆಚ್ಚಾಗತೊಡಗಿದೆ. 

ಹೀಗಾಗಿ ಈ ವಿಚಾರದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವ ಯಡಿಯೂರಪ್ಪ ಅವರು, ಬಂಡಾಯ ದೂರಾಗಿಸಲು ಹಾಗೂ ಮುಂದಿನ ಸಂಪುಟ ಪುನಾರಚನೆಯಲ್ಲಿ ಪ್ರಸ್ತುತ ಎದುರಾಗಿರುವ ಅಸಮತೋಲನವನ್ನು ಸರಿಪಡಿಸುವ ಕಾರ್ಯ ಮಾಡುವತ್ತ ಚಿಂತನೆ ನಡೆಸಿದ್ದಾರೆ. ಈಗಾಗಲೇ ಈ ಬಗ್ಗೆ ಕೇಂದ್ರೀಯ ನಾಯಕರ ಬಳಿಯೂ ಮಾತುಕತೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಈಗಾಗಲೇ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ರಾಜಧಾನಿ ದೆಹಲಿಯಲ್ಲಿದ್ದು, ಶೀಘ್ರದಲ್ಲಿಯೇ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ದೆಹಲಿಯಲ್ಲಿರುವ ವಿಜಯೇಂದ್ರ ಅವರು ಬಂಡಾಯ ಶಮನಕ್ಕೆ ಮುಖ್ಯಮಂತ್ರಿಗಳ ತಂತ್ರಗಳನ್ನು ಕೇಂದ್ರೀಯ ನಾಯಕರಿಗೆ ವಿವರಿಸಿದ್ದಾರೆಂದು ಹೇಳಲಾಗುತ್ತಿದೆ. 

ಪ್ರಸ್ತುತ ಯಾವುದೇ ಸಂಪುಟ ಪುನಾರಚನೆಗಳೂ ನಡೆಯುವುದಿಲ್ಲ. ನೂತನವಾಗಿ ಸಚಿವರಾಗಿರುವವರಿಗೆ ಖಾತೆ ಹಂಚಿಕೆ ಕುರಿತಂತೆ ಮುಖ್ಯಮಂತ್ರಿಗಳು ಚಿಂತನೆ ನಡೆಸುತ್ತಿದ್ದಾರೆ. ಬಜೆಟ್ ಪೂರ್ಣಗೊಂಡ ಬಳಿಕ ಕೇವಲ ಸಂಪುಟ ಪುನಾರಚನೆಯಷ್ಟೇ ಅಲ್ಲದೇ, ಖಾಲಿಯಿರುವ ಹುದ್ದೆಗಳನ್ನು ಭರ್ತಿಗೊಳಿಸಲಿದ್ದಾರೆಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಮಾಹಿತಿ ನೀಡಿವೆ. 

SCROLL FOR NEXT