ರಾಜಕೀಯ

ಕಾಂಗ್ರೆಸ್ ನಾಯಕರು ನಿರ್ಗತಿಕರು: ಆರ್.ಅಶೋಕ್

Srinivasamurthy VN

ಬೆಂಗಳೂರು: ನಿರ್ಗತಿಕರಾಗಿರುವ ಕಾಂಗ್ರೆಸ್‌ ನಾಯಕರಿಗೆ ಬೇಕಿದ್ದರೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಊಟ ಹಾಕಿಸಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ 112ನೇ ಜನ್ಮದಿನ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣಲ್ಲಿ ಕೆಂಗಲ್ ಪ್ರತಿಮೆ ಬಳಿ, ದಿ. ಹನುಮಂತಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದರು. ಈ ವೇಳೆ ರಾಮನಗರ ಭಾಗದಲ್ಲಿ ಹಿಂದೂ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೆದರಿದ್ದಾರೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ. 

'ಡಿ.ಕೆ.ಶಿವಕುಮಾರ್ ಈಗಾಗಲೇ ರಾಮನಗರ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಉಳಿದುಕೊಂಡಿರುವುದು ಕನಕಪುರ ಕ್ಷೇತ್ರ ಮಾತ್ರ. ಮೊದಲು ಅವರು ಆ ಕ್ಷೇತ್ರವನ್ನು ಉಳಿಸಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರು. ಆರ್ ಎಸ್ ಎಸ್ ಕಾರ್ಯಕರ್ತರಿಗೆ ಊಟ ಹಾಕಿಸುವುದಾಗಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಅಹಂಕಾರದ ಪರಮಾವಧಿ. ಕಾಂಗ್ರೆಸ್ ನಾಯಕರು ನಿರ್ಗತಿಕರಾಗಿದ್ದು, ಶಿವಕುಮಾರ್ ಊಟ ಹಾಕಿಸುವುದೇ ಆಗಿದ್ದರೆ ನಿರ್ಗತಿಕ ಕಾಂಗ್ರೆಸ್ ನಾಯಕರಿಗೆ ಊಟ ಹಾಕಿಸಲಿ ಎಂದು ತಿರುಗೇಟು ನೀಡಿದರು.

ಆರ್‌ಎಸ್ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯನ್ನು ಕಂದಾಯ ಸಚಿವ ಆರ್. ಅಶೋಕ್ ಸಮರ್ಥನೆ ಮಾಡಿಕೊಂಡಿದ್ದು, ಕಪಾಲಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ತೀವ್ರಗೊಂಡಿರೋದು ನಿಜ. ಒಂದೇ ಕೋಮಿಗೆ ಭೂಮಿ ಹಂಚಲಾಗುತ್ತಿದೆ. ಅಲ್ಲದೆ ಸರ್ಕಾರಿ ಭೂಮಿ ಲಪಟಾಯಿಸುವ ಹುನ್ನಾರವೂ ನಡೆದಿದೆ‌. ನಾವೆಲ್ಲ ಮುನೇಶ್ವರನ ಆರಾಧಕರು. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕೂಡ ಮುನೇಶ್ವರನ ಭಕ್ತರೇ. ಹಾಗಾಗಿ ಮುನೇಶ್ವರ ಬೆಟ್ಟವನ್ನು ಉಳಿಸಿಕೊಳ್ಳುತ್ತೇವೆ ಎಂದು ಆರ್. ಅಶೋಕ್ ಹೇಳಿದರು.

SCROLL FOR NEXT