ರಾಜಕೀಯ

ಆಪ್‌ನಂತೆ ಕರ್ನಾಟಕದಲ್ಲಿ ಜೆಡಿಎಸ್‌ ಗೆಲ್ಲಿಸಿ: ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ದೇವೇಗೌಡ ಕರೆ

Raghavendra Adiga

ಬೆಂಗಳೂರು:  ದೆಹಲಿಯಲ್ಲಿ ಪ್ರಾದೇಶಿಕ ಪಕ್ಷ ಆಮ್‌ಆದ್ಮಿ ಪಾರ್ಟಿ ಗೆಲುವು ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಪಕ್ಷ‌ ಸಂಘಟನೆಗೆ ಪ್ರೇರಣೆ ನೀಡಿರುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಮಹಾ ಅಧಿವೇಶನವನ್ನುದ್ದೇಶಿಸಿ ಅವರು ಮಾತನಾಡಿದರು.

ಆಪ್ ಮೊದಲ ಬಾರಿ ಅಧಿಕಾರ ಕಳೆದುಕೊಂಡು ಎರಡನೇ ಬಾರಿ ಅಧಿಕಾರ ಪಡೆಯಿತು. ಆಪ್ ಕಾರ್ಯಕರ್ತರ ನಿರಂತರ ಹೋರಾಟ ಪರಿಶ್ರಮವೇ ಎಎಪಿ ಜಯ ಗಳಿಸಲು ಸಾಧ್ಯವಾಯಿತು. ಅರವಿಂದ್ ಕೇಜ್ರಿವಾಲ್ ಜನ ಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡಿದರು. ಶಿಕ್ಷಣ ನೀರಾವರಿ, ಸಾರಿಗೆ ಸೇರಿದಂತೆ ಸಾಮಾನ್ಯ ಸಮಸ್ಯೆಗೆ ಹೆಚ್ಚು ಒತ್ತು ನೀಡಿದರು. ಆದರೆ ಬಿಜೆಪಿಯವರು ಸಿಎಎ ಎಂದು ಹೇಳಿ ಅಭಿವೃದ್ಧಿಯನ್ನೇ‌ ಮರೆತರು. ಬಿಜೆಪಿಗರು ತಮ್ಮದು ರಾಷ್ಟ್ರೀಯ ಪಕ್ಷ . ದೇಶದಲ್ಲಿ ನಾವೇ ಇರುವುದು ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಜನ ಅದನ್ನು ಕೇಳಲಿಲ್ಲ. ಎಎಪಿ ಗೆಲುವು ನಮಗೆ ಸ್ಫೂರ್ತಿ ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ಸಿಎಎ, ಎನ್‌ಪಿಆರ್‌ ವಿರುದ್ಧ ಹೋರಾಟದ ನಿರ್ಣಯ

ಇನ್ನು ಇಂದು ನಡೆದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ದೇಶಾದ್ಯಂತ ನಡೆಯುತ್ತಿರುವ ಸಿಎಎ, ಎನ್‌ಪಿಆರ್‌ ವಿರುದ್ಧ ಹೋರಾಟದ ಪರ ನಿರ್ಣಯ ತೆಗೆದುಕೊಳ್ಲಲಾಗಿದೆ. ಕೇಂದ್ರ ಸರ್ಕಾರ ತಕ್ಷಣವೇ ಸಿಎಎಕಾಯ್ದೆ ಹಿಂಪಡೆಯಬೇಕು. ಈ ಕುರಿತು ಹೋರಾಟಕ್ಕೆ ಪ್ರಾದೇಶಿಕ ಪಕ್ಷಗಳು, ಜಾತ್ಯಾತೀತ ಶಕ್ತಿಗಳೂ ಒಂದಾಗಿ ನಿಲ್ಲಬೇಕು ಎಂದು ಪಕ್ಷ ಆಗ್ರಹಿಸಿದೆ.

ಅಭಿವೃದ್ಧಿ ಹರಿಕಾರನನ್ನು 'ಭಯೋತ್ಪಾದಕ' ರೆಂದವರಿಗೆ ತಕ್ಕ ಪಾಠ: ಕುಮಾರಸ್ವಾಮಿ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಆಪ್ ನ ಅರವಿಂದ ಕೇಜ್ರಿವಾಲ್ ಗೆ ಶುಭ ಹಾರೈಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದೆಹಲಿ ಜನರು ಅಭಿವೃದ್ಧಿ ಹರಿಕಾರನನ್ನು 'ಭಯೋತ್ಪಾದಕ' ರೆಂದವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಟ್ವೀಟ್ ಮಾಡಿ ಕೇಜ್ರಿವಾಲ್ ಗೆಲುವನ್ನು ಹಾರೈಸಿರುವ ಕುಮಾರಸ್ವಾಮಿ ""ಹಣ, ತೋಳ್ಬಲಗಳಿಲ್ಲದೆಯೂಅಭಿವೃದ್ಧಿಯನ್ನೇ ಮಾನದಂಡವಾಗಿಸಿ ಯಶಸ್ವಿ ರಾಜಕಾರಣದ ಸಾಧ್ಯತೆಯನ್ನು ಸಾಕ್ಷಿಕರಿಸಿದ AAP ಹಾಗೂ ದೆಹಲಿ ಮತದಾರರಿಗೆ ಅಭಿನಂದನೆಗಳು.

"ಬಿಜೆಪಿ, ಅದರಲ್ಲೂ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಸೇರಿದಂತೆ ಇಡೀ ಕೇಂದ್ರ ಸರಕಾರ ತನ್ನ 'ಚಾಣಕ್ಯ' ಬಲ ಪ್ರದರ್ಶಿಸಿದರೂ ದೆಹಲಿಯ ಪ್ರಬುದ್ಧ ಮತದಾರ ತನ್ನ ನಿಲುವು ಬದಲಿಸಲಿಲ್ಲ. ಜನತಾ ನ್ಯಾಯಾಲಯದ ಈ ತೀರ್ಪು ಸ್ವಾಗತಾರ್ಹ

"ಅಭಿವೃದ್ಧಿ ಹರಿಕಾರನನ್ನು 'ಭಯೋತ್ಪಾದಕ' ಎಂದಿದ್ದಕ್ಕಾಗಿ ತಕ್ಕ ಪಾಠ ಕಲಿಸಿದ್ದಾರೆ. ಈ ಮೂಲಕ ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಎತ್ತಿಹಿಡಿದ  ದೆಹಲಿಯ ಮತದಾರರು ತಮ್ಮ ಆದ್ಯತೆ ಅಭಿವೃದ್ಧಿಗೆ ಅಷ್ಟೇ ಎಂಬುದರ ಮೇಲ್ಪಂಕ್ತಿ ಹಾಕಿದ್ದಾರೆ." ಎಂದು ಬರೆದುಕೊಂಡಿದ್ದಾರೆ.

SCROLL FOR NEXT