ರಾಜಕೀಯ

ಕೈತಪ್ಪಿದ ಸಚಿವ ಸ್ಥಾನ: ಬೇಸತ್ತ ಉಮೇಶ್ ಕತ್ತಿಯಿಂದ ಜೆಡಿ ನಡ್ಡಾ ಭೇಟಿ

Manjula VN

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಉಮೇಶ್ ಕತ್ತಿ ಮತ್ತು ಅವರ ಸಹೋದರ ರಮೇಶ್ ಕತ್ತಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತು ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಇಬ್ಬರೂ ಸಹೋದರರು ತಮಗಾದ ಅನ್ಯಾಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಳಿ ಹಂಚಿಕೊಂಡಿದ್ದಾರೆ. 

ಲೋಕಸಭೆ ಚುನಾವಣೆ ವೇಳೆ ರಮೇಶ್ ಕತ್ತಿ ಅವರಿಗೆ ಟಿಕೆಟ್ ನೀಡದೆ ಸಚಿವೆ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿ ರಾಜ್ಯಸಭಾ ಸದಸ್ಯ ಸ್ಥಾನ ನೀಡುವಂತೆ ಉಮೇಶ್ ಕತ್ತಿ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. 

ಉಮೇಶ್ ಕತ್ತಿ ಅವರು ಹಿರಿಯ ಶಾಸಕರಾಗಿದ್ದು, ಸಚಿವ ಸ್ಥಾನ ಕೇಳಿರಲಿಲ್ಲ. ಆದರೂ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಕತ್ತಿಯವರನ್ನು ಸಚಿವರನ್ನಾಗಿ ಮಾಡುವುದಾಗಿ ಹೇಳಿರುವುದು ಪದೇ ಪದೇ ತೊಂದರೆಯನ್ನುಂಟು ಮಾಡಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದೆ ಏನಾದರೂ ಆದರೆ ನಮ್ಮ ಮೇಲೆ ಅಪವಾದ ಬೇಡ ಎಂದು ಸ್ಪಷ್ಟವಾಗಿ ರಮೇಶ್ ಕತ್ತಿ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. 

ಇದಕ್ಕೂ ಮುನ್ನ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿಯಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಭೇಟಿಯಾಗಲಿದ್ದು, ಅವರೊಂದಿಗೆ ಸಚಿವ ಸ್ಥಾನ ತಪ್ಪಿರುವ ಕುರಿತು ಮಾತಿಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT