ರಾಜಕೀಯ

ಭಾಗ್ಯದ ಬಾಗಿಲಲ್ಲ, ಸಂಕಷ್ಟದಲ್ಲಿದ್ದಾಗ ಮನೆಯ ಬಾಗಿಲೇ ತೆಗೆಯಲಿಲ್ಲ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

Manjula VN

ಬೆಂಗಳೂರು: ಚುನಾವಣೆ ವೇಳೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತೇನೆಂದು ಹೇಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪ್ರವಾಹ ಬಂದಾಗ ಸಂಕಷ್ಟ ಆಲಿಸಲು ತಮ್ಮ ಮನೆಯ ಬಾಗಿಲೇ ತೆರೆಯಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಪ್ರಧಾನಮಂತ್ರಿ ಹುದ್ದೆ ಯಾವ ಪಕ್ಷಕ್ಕೂ ಸೀಮಿತವಲ್ಲ. ಬಹಳ ದಿನಗಳ ಬಳಿಕ ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದಿದ್ದಾರೆ. ವಿರೋಧ ಪಕ್ಷವಾಗಿ ನಾನು ಅವರನ್ನು ಸ್ವಾಗತಿಸುತ್ತೇನೆ. ಫುಡ್ ಪಾರ್ಕ್ ಉದ್ಘಾಟನೆ ವೇಳೆ 10 ಸಾವಿರ ನೇರ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಹೇಳಿದ್ದರು. ಆದಾವದೂ ಆಗಲೇ ಇಲ್ಲ. ಹೇಮಾವತಿ ನದಿ ಜೋಡವಣೆ ಮಾಡುವುದಾಗಿ ಹೇಳಿದ್ದರು. ಆಗಿದೆಯೋ, ಇಲ್ಲವೋ ತಿಳಿಯಲಿಲ್ಲ ಎಂದು ಹೇಳಿದ್ದಾರೆ. 

ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ ಪ್ರವಾಹ ಎದುರಾಗಿತ್ತು. ಚುನಾವಣೆ ವೇಳೆ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದಿದ್ದರು. ಆದರೆ, ಪ್ರವಾಹ ಬಂದಾಗ ತಮ್ಮ ಮನೆಯ ಬಾಗಿಲನ್ನೇ ತೆರೆಯಲಿಲ್ಲ. ರಾಜ್ಯದ ಸಂಕಷ್ಟವನ್ನು ಕೇಳಲೇ ಇಲ್ಲ. ಕನಿಷ್ಠ ಪಕ್ಷ ಟ್ವೀಟ್ ಮೂಲಕವೂ ರಾಜ್ಯ ಸಂಕಷ್ಟವನ್ನು ಆಲಿಸಲೇ ಇಲ್ಲ. ರೈತರ ಆದಾಯ 2020ಕ್ಕೆ ದುಪ್ಪಟ್ಟು ಮಾಡುತ್ತೇವೆಂದು ಹೇಳಿದ್ದರು. ರೈತರ ಸಂಕಷ್ಟ ದುಪ್ಪಟ್ಟಾಗಿದೆಯೇ ವಿನಃ ಅವರ ಆದಾಯವಲ್ಲ. ಮಹದಾಯಿ ವಿವಾದ ಬಗೆಹರಿದಿಲ್ಲ. ಮೋದಿ, ಯಡಿಯೂರಪ್ಪ, ಜವಡೇಕರ್ ಮಹದಾಯಿ ಬಗ್ಗೆ ಕೇವಲ ಸುಳ್ಳನ್ನೇ ಹೇಳುತ್ತಾರೆ. 

ಮೋದಿಯವರು ನೀಡಿದ್ದ ಶೇ.90 ರಷ್ಟು ಭರವಸೆಗಳನ್ನು ಪೂರ್ಣಗೊಳಿಸಿಲ್ಲ. ರಾಜ್ಯಕ್ಕೆ ಬಂದಾಗಲೆಲ್ಲಾ ಕೇವಲ ಸುಳ್ಳುಗಳನ್ನೇ ಹೇಳುತ್ತಾರೆ. ಕರ್ನಾಟಕಕ್ಕೆ ಬಂದಾಗ ಪ್ರವಾಹ ಪರಿಹಾರದ ಬಗ್ಗೆ, ರೈತರ ಕುರಿತು ಒಂದು ಪದವನ್ನೂ ಮಾತನಾಡಲಿಲ್ಲ. ಆಕಾಶ ತೋರಿಸಿ ಸ್ವರ್ಗವನ್ನು ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

SCROLL FOR NEXT