ರಾಜಕೀಯ

ಸಿದ್ದಗಂಗಾ ಮಠದಲ್ಲಿ ಮೋದಿ ರಾಜಕೀಯ ಭಾಷಣ- ಮಲ್ಲಿಕಾರ್ಜುನ ಖರ್ಗೆ ಕಿಡಿ

Nagaraja AB

ಬೆಂಗಳೂರು: ಸಿದ್ದಗಂಗಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ರಾಜಕೀಯ ಭಾಷಣದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ

 ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಹೇಳಲು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಿದ್ದರೇ ಹೊರತು ಇಲ್ಲಿನ ಜನರ ಸಮಸ್ಯೆ ಆಲಿಸುವುದಕ್ಕಲ್ಲ ಎಂದಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ  ಪೌರತ್ವ ತಿದ್ದುಪಡಿ ವಿರೋಧಿಸುವವರ ಬಾಯಿ ಮುಚ್ಚಿಸುವ ಕೆಲಸ  ಮಾಡುತ್ತಿದ್ದಾರೆ. ಸಿದ್ದಗಂಗಾ ಮಠದ ಶ್ರೀಗಳು ಜಾತ್ಯತೀತವಾಗಿ ದೇಶವೇ ಮೆಚ್ಚುವಂತಹ ಸೇವಾ  ಕಾರ್ಯಗಳನ್ನು ಮಾಡಿದ್ದಾರೆ. ಅಂತಹ ಮಠಕ್ಕೆ ಹೋಗಿ ಮೋದಿ ರಾಜಕೀಯದ ಬಗ್ಗೆ  ಭಾಷಣ  ಮಾಡಿದ್ದು ಸರಿಯೇ ? ಎಂದು ಪ್ರಶ್ನಿಸಿದರು.

ಸಿದ್ದಗಂಗಾ ಮಠದ ವೇದಿಕೆಯನ್ನು ಮೋದಿ  ಸರ್ಕಾರದ ಸಾಧನೆಗಳ ಬಗ್ಗೆ ಹೇಳಲು ಬಳಸಬೇಕಿತ್ತು. ಆದರೆ ಅದನ್ನು ಬಿಟ್ಟು ವಿಪಕ್ಷಗಳ ವಿರುದ್ಧ ಮಾತನಾಡಲು ಆ ವೇದಿಕೆ ಬಳಸಿಕೊಂಡಿರುವುದು ಖಂಡನೀಯ. ಮೋದಿ ರಾಜ್ಯದ ಸುಖ- ದು:ಖ ನೋಡಲು  ಬಂದಿರಲಿಲ್ಲ. ರಾಜ್ಯದಲ್ಲಿ ನೆರೆ ಬಂದಾಗ ಜನ ಬೀದಿಗೆ ಬಿದ್ದಾಗ ಮೋದಿಗೆ ಕರ್ನಾಟಕದ ಜನರ  ನೆನಪಾಗಲಿಲ್ಲ. ಆದರೀಗ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಹೇಳಲು  ಬಂದಿದ್ದರು ಎಂದರು. 

ಕೇಂದ್ರದ ಕಾಯಿದೆಗೆ ಸಾರ್ವಜನಿಕವಾಗಿ ದೇಶದಲ್ಲಿ ವಿರೋಧ  ವ್ಯಕ್ತವಾಗುತ್ತಿರುವುದರಿಂದ ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೆ ಮೋದಿ ಭೇಟಿ  ಕೊಡುತ್ತಿದ್ದಾರಷ್ಟೆ ಎಂದು ಖರ್ಗೆ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಸಚಿವ ಸ್ಥಾನ  ಹಂಚಿಕೆ ವಿಚಾರದಲ್ಲಿ ಶಿವಸೇನೆ ಮತ್ತು ಎನ್ ಸಿಪಿ ನಡುವೆ ಗೊಂದಲ ಇರುವುದು ಬಿಟ್ಟರೆ  ಕಾಂಗ್ರೆಸ್ ನಿಂದ ಯಾರನ್ನು ಮಂತ್ರಿ ಮಾಡಬೇಕು ಎನ್ನುವ ಬಗ್ಗೆ  ಸ್ಪಷ್ಟತೆಯಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT