ರಾಜಕೀಯ

ಎಲ್ಲಾ ದೇವರು ಒಂದೇ, ದೇವರನ್ನು ಬೇರೆ ಮಾಡಲು ಹೋದರೆ ಸ್ವಾರ್ಥ ರಾಜಕಾರಣವಾಗುತ್ತದೆ: ಶ್ರೀರಾಮುಲು

Srinivasamurthy VN

ಚಿತ್ರದುರ್ಗ: ಎಲ್ಲಾ ದೇವರು ಒಂದೇ‌. ಯೇಸು ಬೇರೆ ಹಿಂದೂ ಮುಸ್ಲಿಂ ದೇವರು ಬೇರೆ ಎಂಬುದಿಲ್ಲ. ದೇವರನ್ನು ಬೇರೆ  ಮಾಡಲು ಹೋದರೆ ಅದು ಸ್ವಾರ್ಥ ರಾಜಕಾರಣ ಆಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಪಕ್ಷದ ಮುಖಂಡರಿಗೆ ತಿರುಗೇಟು ನೀಡಿದ್ದಾರೆ. 

ಮೊಳಕಾಲ್ಮೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ನಾಯಕರಿಗೂ ಸಹ ಯಾವುದೇ ವಿಷಯ ಇಲ್ಲವಾಗಿದೆ. ಹೀಗಾಗಿ ಯೇಸು ಪ್ರತಿಮೆ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ನಿವಾಸದ ಮುಂದೆ ಪ್ರತಿಭಟನೆ ಮಾಡಲು ತೆರಳಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದ ಶ್ರೀರಾಮುಲು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಗೆ ಕಾವಲುಗಾರನಾಗುತ್ತೇನೆ ಎಂದು ಜಮೀರ್ ಅಹ್ಮದ್ ಹೇಳಿದ್ದರು. ಆದರೆ‌ ಹೇಳಿದಂತೆ ಜಮೀರ್ ಕಾವಲುಗಾರನ ಕೆಲಸ ಮಾಡಿಲ್ಲ. ಆತ ವಚನ ಭ್ರಷ್ಟ ಎಂದು ತಿರುಗೇಟು ನೀಡಿದರು.

ಅವಸರದಲ್ಲಿ ಸೋಮಶೇಖರರೆಡ್ಡಿ ಏನನ್ನೋ ಮಾತಾಡಿರಬಹುದು. ಜಮೀರ್ ಅಹ್ಮದ್ ಅವರೇನು ಕಡಿಮೆ ಇಲ್ಲ. ಅವರೂ ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಜಮೀರ್ ಹಾಗೂ ಸಿದ್ಧರಾಮಯ್ಯ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧರಣಿ ನಡೆಸಲು ಮುಂದಾಗಿದ್ದಾರೆ. ಶಾಸಕರ ಮನೆ ಎದುರು ಧರಣಿ ಮಾಡುವುದು ಸಂಸ್ಕೃತಿ ಅಲ್ಲ. ಹಿಂದೂ ಮುಸ್ಲಿಂರ ಮಧ್ಯೆ ಜಗಳ ತಂದಿಡಲು ಇವರು ಧರಣಿ ಮಾಡುತ್ತಿದ್ದಾರೆ ಎಂದರು. 

ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ಬಗ್ಗೆ ಜಮೀರ್ ಅಹಮದ್ ಮತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಓದಿ ಕೊಳ್ಳಲಿ. ಸಿದ್ದರಾಮಯ್ಯ ವಕೀಲರು, ಬುದ್ಧಿವಂತರಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಮಾತನಾಡಬೇಕು. ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಶ್ರೀರಾಮುಲು ಆರೋಪಿಸಿದರು.

SCROLL FOR NEXT