ರಾಜಕೀಯ

ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್, ರಾಜೀನಾಮೆ ಹಿಂಪಡೆಯಲು ಮನವೊಲಿಕೆ ಸಾಧ್ಯ

Sumana Upadhyaya

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ 1 ತಿಂಗಳು ಕಳೆದ ನೆತರ ಸಿದ್ದರಾಮಯ್ಯನವರು ಪಕ್ಷದ ಕೇಂದ್ರ ನಾಯಕರನ್ನು ಭೇಟಿ ಮಾಡಲು ಹೊರಟಿದ್ದಾರೆ. ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸಿದ್ದರಾಮಯ್ಯನವರು ಭೇಟಿ ಮಾಡಲಿದ್ದಾರೆ.


ಕಳೆದ ಉಪ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋತ ನಂತರ ನೈತಿಕ ಹೊಣೆ ಹೊತ್ತು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದರು. ನಂತರ ಬೇರೆ ನಾಯಕರ ನೇಮಕ ಆಗಿರಲಿಲ್ಲ. ಇದೀಗ ಹೈಕಮಾಂಡ್ ಆದೇಶದಂತೆ ಸಿದ್ದರಾಮಯ್ಯನವರು ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದಾರೆ. ನಾಳೆ ರಾತ್ರಿ ಬೆಂಗಳೂರಿಗೆ ಹಿಂತಿರುಗಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಕಚೇರಿಯ ಪತ್ರಿಕಾ ಹೇಳಿಕೆ ತಿಳಿಸಿದೆ.


ಡಿ ಕೆ ಶಿವಕುಮಾರ್ ಅವರು ದೆಹಲಿಗೆ ಹೋಗಿ ಬಂದ ನಂತರ ಸಿದ್ದರಾಮಯ್ಯ ಹೋಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಿದ್ದರಾಮಯ್ಯನವರಲ್ಲಿ ಮಾತುಕತೆ ನಡೆಸಿ ರಾಜಿನಾಮೆಯನ್ನು ಹಿಂಪಡೆಯುವಂತೆ ಹೇಳಿದ್ದರು. ಇದೀಗ ಸೋನಿಯಾ ಗಾಂಧಿಯವರು ಸಿದ್ದರಾಮಯ್ಯನವರ ಮನವೊಲಿಸುವ ಸಾಧ್ಯತೆಯಿದೆ.


ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಶೀತಲ ಸಮರದ ಮಧ್ಯೆ ಇಂದಿನ ಭೇಟಿ ಮೂಲಕ ಉಭಯ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಹೈಕಮಾಂಡ್ ಬಗೆಹರಿಸಲು ಪ್ರಯತ್ನಿಸುವ ಸಾಧ್ಯತೆಯಿದೆ.ಸಿದ್ದರಾಮಯ್ಯನವರನ್ನು ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯುವಂತೆ ಮತ್ತು ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಿಸುವ ಸಾಧ್ಯತೆಯಿದೆ.

SCROLL FOR NEXT