ರಾಜಕೀಯ

ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯ ಅಗತ್ಯವಿಲ್ಲ: ಜಿ.ಪರಮೇಶ್ವರ್ 

Manjula VN

ಬೆಂಗಳೂರು: ಕೆಪಿಸಿಸಿಗೆ ನಾಲ್ಕು ಮಂದಿ ಕಾರ್ಯಾಧ್ಯಕ್ಷ ನೇಮಕಕ್ಕೆ ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಮಾತನಾಡಿರುವ ಅವರು, ಕೆಪಿಸಿಸಿಗೆ ಒಬ್ಬರು ಅಧ್ಯಕ್ಷರು ಮಾತ್ರ ಇರಬೇಕು. 4 ಮಂದಿ ಕಾರ್ಯಾಧ್ಯಕ್ಷರು ಇರುವುದು ಒಳ್ಳೆಯದಲ್ಲ. ನನ್ನ ದೃಷ್ಟಿಯಲ್ಲಿ ಒಂದು ಉಪಾಧ್ಯಕ್ಷ ಸ್ಥಾನ ಕೂಡ ಇರಬಾರದು. ಈ ರೀತಿಯ ಹುದ್ದೆಗಳ ಸೃಷ್ಟಿಯಿಂದ ಗುಂಪುಗಾರಿಕೆ ಶುರುವಾಗುತ್ತದೆ. ಪರಸ್ಪರ ಆಪಾದನೆಗಳು ಶುರುವಾಗುತ್ತವೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ಒಬ್ಬರನ್ನೂ ಮಾತ್ರ ನೇಮಿಸಿ, ಕಾರ್ಯಾಧ್ಯಕ್ಷ ಉಪಾಧ್ಯಕ್ಷರನ್ನು ನೇಮಿಸದೆ ಅಧಿಕಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. 

ಕಾರ್ಯಾಧ್ಯಕ್ಷರ ನೇಮಕದಿಂದ ಪಕ್ಷದಲ್ಲಿ ಗುಂಪುಗಾರಿಕೆ ಶುರುವಾಗುತ್ತದೆ. ಇದು ಪಕ್ಷದ ಬೆಳವಣಿಗೆಗೆ ಒಳ್ಳೆಯದಲ್ಲ. ಇದು ಪಕ್ಷದ ಬೆಳವಣಿಗೆಗೆ ಒಳ್ಳೆಯದಲ್ಲ. ಪಕ್ಷದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ ಅನುಭವದ ಮೇಲೆ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ದೆಹಲಿಗೆ ಕರೆದು ಈ ಬಗ್ಗೆ ಅಭಿಪ್ರಾಯ ಕೇಳುತ್ತಾರೆಂದುಕೊಂಡಿದ್ದೆವು. ಆದರೆ, ಅದು ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರದಲ್ಲಿ ಗೊಂದಲ ಉಂಟಾಗಿರುವುದು ಸತ್ಯ. ಯಾರನ್ನೇ ನೇಮಕ ಮಾಡಿದರೂ ಶೀಘ್ರ ಘೋಷಣೆ ಮಾಡಬೇಕು. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷದ ದೃಷ್ಟಿಯಿಂದ ಉತ್ತಮವಲ್ಲ ಎಂದು ಪರಮೇಶ್ವರ್ ಅವರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ. 

ಮಾಧ್ಯಮಗಳಲ್ಲಿ ದಿನನಿತ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕ ಡಿಕೆ.ಶಿವಕುಮಾರ್, ಎಂಬಿ ಪಾಟೀಲ್ ಅವರ ಹೆಸರುಗಳು ಓಡಾಡುತ್ತಿವೆ. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಸಾರ್ವತ್ರಿಕ ಚುನಾವಣೆಯೂ ಬರಬಹುದಾದ ಸಾಧ್ಯತೆಗಳಿವೆ. ಈ ಹಂತದಲ್ಲಿ ಇಂತಹ ಗೊಂದಲ ಮುಂದುವರೆಯುವುದು ಪಕ್ಷಕ್ಕೆ ಮಾರಕ ಎಂದು ಸ್ಪಷ್ಟಪಡಿಸಿದ್ದಾರೆ. 

SCROLL FOR NEXT