ರಾಜಕೀಯ

ಪಕ್ಷ ಸಂಘಟನೆಗೆ ಕಾರ್ಯಕರ್ತರು ಸೈನಿಕರಂತೆ ಸಜ್ಜಾಗಲಿ: ದೇವೇಗೌಡ ಕರೆ

Raghavendra Adiga

ಬೆಂಗಳೂರು:  ಚುನಾವಣೆ ಯಾವ ಸಂದರ್ಭದಲ್ಲಿಯೂ ಬಂದರೂ ಎದುರಿಸುವ ಸಾಮರ್ಥ್ಯ ಹೊಂದಲು ಸಂಘಟನೆಗೆ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಸಜ್ಜಾಗಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ.

ನಗರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಉಪಚುನಾವಣೆ ಸೋಲಿನಿಂದ ಪಕ್ಷಕ್ಕೆ ಹೊಡೆತ ಬಿದ್ದಿದ್ದು ನಿಜವಾದರರೂ ಕಾರ್ಯಕರ್ತರ ಸಂಘಟನೆಯಿಂದ ಪಕ್ಷ ಮತ್ತೆ ಬಲಗೊಳ್ಳಬಹುದು. ಪಕ್ಷ ಸಂಘಟನೆ ಎನ್ನುವುದು ಒಬ್ಬ ದೇವೇಗೌಡ, ಕುಮಾರಸ್ವಾಮಿಯಿಂದ ಮಾತ್ರ ಸಾಧ್ಯವಿಲ್ಲ. ಮಂಗಳೂರಿಗೆ ಕುಮಾರಸ್ವಾಮಿ ಭೇಟಿ ಕೊಟ್ಟು ಮತೀಯ ಸಂಘರ್ಷದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಂತೆ‌ ಯಾವುದೇ ಬೇಧ ಭಾವ ಆಗಬಾರದೆಂದು ಕಲಬುರಗಿಗೂ ಹೋಗಿದ್ದರು ಎಂದರು.

ಎಚ್.ಕೆ.ಕುಮಾರಸ್ವಾಮಿ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ಮೇಲೆ ಸಂಘಟನೆಯ ವಿಚಾರದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ದುಡಿಯುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಇಲ್ಲದಿದ್ದರೂ ಜನಾನುರಾಗ ಉಳಿಸಿಕೊಂಡಿದ್ದಾರೆ. ಮೈತ್ರಿ ಸರ್ಕಾರ ರಚನೆಯಲ್ಲಿ ಯಾರು ಸರಿ, ಯಾರದ್ದು ತಪ್ಪು ಎಂಬ ಚರ್ಚೆಯ ಅವಶ್ಯಕತೆ ಇಲ್ಲ. ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ ಸಹ ಬಿಜೆಪಿ ವಿರುದ್ಧ ಸಜ್ಜಾಗುತ್ತಿದೆ. ಕಾಂಗ್ರೆಸ್‌ಗೆ ಪರ್ಯಾಯವಾಗಿ ಆಗ ಜನತಾಪಕ್ಷ ಹುಟ್ಟುಕೊಂಡಿತ್ತು. ಸಣ್ಣ ಸಣ್ಣ ಪಕ್ಷಗಳಾಗಿ ಜನತಾದಳ, ಜೆಡಿಯು , ಇವೆಲ್ಲವನ್ನು ಒಗ್ಗೂಡಿಸಿ ಪಕ್ಷ ಉಳಿಸಬೇಕೆಂಬ ಉದ್ದೇಶವಿದೆ. ಹಿಂದೂ, ಕ್ರೈಸ್ತರು, ಮುಸ್ಲಿಮರು ಈ ಮೂರು ಧರ್ಮಗಳನ್ನು ನಮ್ಮ‌ರಾಷ್ಟ್ರಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಎರಡ‌ನೇ ಪ್ರಬಲ ಸಮುದಾಯ ಮುಸ್ಲಿಮರಾಗಿದ್ದಾರೆ. ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ಬಿಜೆಪಿಗೆ ಅವಕಾಶವಿರಲಿಲ್ಲ‌. ಆದರೆ ಬಿಜೆಪಿ ಕುತಂತ್ರದಿಂದ ಒಪ್ಪಂದದಿಂದ ಬಿಲ್ ಜಾರಿಯಾಯಿತು‌. ಇದರ ದುಷ್ಪರಿಣಾಮ ಏನು ಎಂಬುದು ಈಗ ಎಲ್ಲರಿಗೂ ಅರಿವಾಗುತ್ತಿದೆ ಎಂದರು.

ತಳಮಟ್ಟದ ಪಕ್ಷ‌ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಗಟ್ಟಿಯಾಗಬೇಕು. ಪಕ್ಷದ ನಿರ್ಣಯಗಳಿಗೆ ಕಾರ್ಯಕರ್ತರು ಬದ್ಧರಾಗಿ ಹೋರಾಟಕ್ಕೆ ಸಿದ್ಧರಾಗಬೇಕು. ಕಾರ್ಯಕರ್ತರೇ ಪಕ್ಷದ ಆಸ್ತಿ. ಕಾರ್ಯಕರ್ತರಿಲ್ಲದಿದ್ದರೆ ಹೋರಾಟಕ್ಕೆ ಶಕ್ತಿ ಇಲ್ಲ. ಮುಸಲ್ಮಾನರನ್ನು ಎರಡನೇ ದರ್ಜೆಯ ನಾಗರೀಕರರನ್ನಾಗಿ ಮಾಡಲು ಹೊರಟಿದೆ. ದೇಶದಲ್ಲಿ ಸಮಾರು 40 ಕೋಟಿ ಮುಸ್ಲಿಮರಿದ್ದಾರೆ. ಅಂಬೇಡ್ಕರ್ ಮಾಡಿದ ಸಂವಿಧಾನ ಕಾನೂನನ್ನು ಬದಲಾಯಿಸುವ ಹುನ್ನಾರ ನಡೆದಿದೆ‌. ಹಿಂದೂ ಮಹಾಸಭಾ ಮುಸ್ಲಿಂರು ಜನಸಂಘದ‌ ಸುಮಾರು 70ವರ್ಷದ ಹಿಂದಿನ ವಿರೋಧಿಗಳು ಎಂದು ಹೇಳುತ್ತಿದ್ದಾರೆ. ಸಮಗ್ರ ಹಿಂದೂಸ್ತಾನದಲ್ಲಿ ಜನತಾಪಕ್ಷ‌ ಜನತಾದಳ ಆಗಿದ್ದು ಒಂದು ಘಟನೆಯೇ ಎಂದರು.

ಮೈಸೂರಿನಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯನ್ನು ಪಕ್ಷದಿಂದ ಮೇಯರ್ ಮಾಡಿರುವುದು ರಾಜಕೀಯ ಲಾಭಕ್ಕಾಗಿ ಅಲ್ಲ. ಮುಸ್ಲಿಂ ಸಮುದಾಯದ ಮಹಿಳೆಗೆ ಗೌರವ ನೀಡಲು ಮೇಯರ್ ಮಾಡಲಾಗಿದೆ. 1996ರಲ್ಲಿ ಮಹಿಳಾ ಸ್ಥಾನಮಾನದ ಬಗ್ಗೆ ಪಕ್ಷ ನಿರ್ಣಯ ತೆಗೆದುಕೊಂಡಂತೆ ಮೇಯರ್ ಮಾಡಲಾಗಿದೆ. ಎಲ್ಲಾ ಸಮುದಾಯದ ಮಹಿಳೆಯರಿಗೆ ಅಧಿಕಾರ ಹಂಚಿಕೆ ಮಾಡುವ ತೀರ್ಮಾನವನ್ನು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಿಂದಲೇ ಜಾರಿ ಮಾಡಿದ್ದ ಹೆಮ್ಮೆ ಪಕ್ಷದ್ದು‌. ಆದರೂ ಇದುವರೆಗೆ ಮಹಿಳಾ ಮೀಸಲಾತಿ ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಫೆಬ್ರವರಿ ಮೊದಲನೇ ವಾರದಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶ ನಡೆಯಲಿದ್ದು, ದಿನಾಂಕ 10,11 ರಂದು ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಲಾಗುವುದು. ಇನ್ನುಮುಂದೆ ಪಕ್ಷದ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲನ್ನು ಮೀಸಲಿಡಲಾಗುವುದು ಎಂದು ದೇವೇಗೌಡ ಸ್ಪಷ್ಟಪಡಿಸಿದರು.

ಬಿಜೆಪಿಯದ್ದು ರಕ್ತದ ರಾಜಕಾರಣ:
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬಿಜೆಪಿಗೆ ಬೇಕಾಗಿದ್ದು ರಕ್ತದ ರಾಜಕಾರಣವೇ ಹೊರತು ಜನರ ಅಭಿವೃದ್ಧಿ ಅಲ್ಲ. ದೇಶ ಮತ್ತು ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿದ್ದು,ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಾಗಿದೆ. ಉಪಚುನಾವಣೆಯ ಸೋಲಿನ ಬಳಿಕ ಜೆಡಿಎಸ್ ಕವಲುದಾರಿಯಾಗಿದೆ. ಕವಲು ದಾರಿಯನ್ನು ಸರಿಪಡಿಸಲು ಸಮಾವೇಶ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ನಿರ್ಣಯಗಳ ವಿರುದ್ಧ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ಒಂದಲ್ಲ ಒಂದು ರೀತಿಯ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಸಿಎಎ,ಎನ್‌ಆರ್.ಸಿ, ಎನ್‌ಪಿಆರ್ ವಿರುದ್ಧ, ನೆರೆ ಸಂತ್ರಸ್ತರಿಗೆ ನೆರವು ಹಾಗೂ ಆರ್ಥಿಕ ಕುಸಿತ ಬಗ್ಗೆ ಸಮಾವೇಶದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು ಎಂದು ಆತ್ಮಸ್ಥೈರ್ಯ ತುಂಬಿದರು.

1988ರಲ್ಲಿ ದೇವೇಗೌಡರು ವಿಧಾನಸಭಾ ಮತ್ತು ಲೋಕಸಭಾಚುನಾವಣೆ ಎರಡರಲ್ಲಿಯೂ ಸೋತಿದ್ದರು. ಪಕ್ಷಕ್ಕೆ ಎರಡೇ ಸ್ಥಾನಗಳು ಸಿಕ್ಕಿದ್ದವು. ಆದರೆ ಐದೇ ವರ್ಷದಲ್ಲಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿಯೂ ಆದರು. ಪ್ರಸಕ್ತ ಸನ್ನಿವೇಶ ಸಹ ಹಿಂದಿನಂತೆಯೇ ಇದೆ. ಯಾರೂ ಎದೆಗುಂದದೇ ಸಂಘಟನೆಗೆ ಮುಂದಾದರೆ ಮುಂದೆ ಪಕ್ಷಕ್ಕೆ ಒಳ್ಳೆಯ ದಿನಗಳು ಕಾದಿವೆ ಎಂದು ಭವಿಷ್ಯ ನುಡಿದರು.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ಬಳಿಕ‌ ತೆಗೆದುಕೊಂಡ ನಿರ್ಣಯಗಳು ಅವರೊಬ್ಬರೇ ತೆಗೆದುಕೊಂಡ ನಿರ್ಣಯಗಳಾಗಿರಲಿಲ್ಲ. ಎಲ್ಲರೊಂದಿಗೆ ಚರ್ಚಿಸಿಯೇ ಕಾನೂನು ತಂದಿದ್ದರು. ನೆಹರು ಇದ್ದಾಗ ಅಮಿತ್ ಷಾ ಮತ್ತು ಮೋದಿ ಹುಟ್ಟೇ ಇರಲಿಲ್ಲ. ಅವರು ನಿಧನರಾದ ನಂತರ ಇವರು ಹುಟ್ಟಿದ್ದಾರಷ್ಟೆ. ಅವರ ವಯಸು 54, 56 ಅಷ್ಟೆ. ಸ್ವಲ್ಪ‌ದಷ್ಟ ಪುಷ್ಟರಾಗಿದ್ದಾರಷ್ಟೆ. ಇವರು ನೆಹರು ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ. ಇವರಿಗೆಲ್ಲ ಭಯ ಇರುವುದು ಕುಮಾರಸ್ವಾಮಿ ಮೇಲೆ‌ ಮಾತ್ರ. 2005ರಲ್ಲಿ ಸಂಸದೆ ಶೋಭಾ ಕರಂದ್ಲಾಜೆಗೆ ಯಡಿಯೂರಪ್ಪ ಅವರ ಭೇಟಿಗಾಗಿ ಒಂದು ಚೀಟಿ ಕಳಿಸಿದ್ದನ್ನು ಶೋಭಾ ಕರಂದ್ಲಾಜೆ ಮರೆತಿದ್ದಾರೆನೋ. ರಾಮಚಂದ್ರ ಅವರ ಮೂಲಕ ತಮ್ಮ ಹಾಗೂ ದೇವೇಗೌಡರನ್ನು ಭೇಟಿ ಮಾಡಬೇಕು ಎಂದು ಯಡಿಯೂರಪ್ಪ ಅವರ ಚೀಟಿಯನ್ನು ಕೊಡಲು ಬಂದಿದ್ದರು. ಯಡಿಯೂರಪ್ಪ ನಾವು ಜೆಡಿಎಸ್ ಸೇರುತ್ತೇವೆ‌. ಮಂತ್ರಿ ಸ್ಥಾನ ಕೊಡಿ ಎಂದು ಬಂದಿದ್ದರು. ಆಗ ನಾನು ಸಣ್ಣಬುದ್ಧಿ ಮಾಡಲಿಲ್ಲ.

ಲಿಂಗಾಯತ ಸಮುದಾಯದವರು ಸಂಕುಚಿತ ಭಾವನೆ ಬಿಡಬೇಕು‌‌‌. ಯಡಿಯೂರಪ್ಪ ಮಂತ್ರಿ ಸ್ಥಾನಕೊಡಿ ಎಂದು ನನ್ನ‌ ಹತ್ತಿರವೂ ಹೋಗಿ ಮತ್ತೊಂದು ಕಡೆ ಧರಂಸಿಂಗ್ ಅವರ ಬಳಿಗೂ ಹೋಗಿದ್ದಾರೆ. ಇವರ ಮಾತು ಕೇಳಿ ತಂದೆಯ ಜೀವಕ್ಕೆ ಅಪಾಯ ತರುವಂತೆ ಬಿಜೆಪಿ ಜೊತೆ ಸೇರಿದೆ. ಬಿಜೆಪಿ ಜೊತೆ ಅಧಿಕಾರಕ್ಕಾಗಿ ನಾನು ಹೋಗಲಿಲ್ಲ. ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಹೋಗಬೇಕಾಯಿತು. ಸ್ವಾರ್ಥಕ್ಕಾಗಿ ನಮ್ಮ ಪಕ್ಷವನ್ನು ಎಂದಿಗೂ ನಾನು ಬಲಿಕೊಡಲಿಲ್ಲ. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ದೇವೇಗೌಡರು ತೃತೀಯ ರಂಗ‌ರಚನೆ ಮಾಡಲು ಮುಂದಾಗಿದ್ದರು. ಆಗ ಕಾಂಗ್ರೆಸ್‌ನ ಸೋನಿಯಾಗಾಂಧಿ ಜೆಡಿಎಸ್‌ಗೆ ಒಂಭತ್ತು ಸ್ಥಾನ ಕೊಡುತ್ತೇನೆ ಎಂದರು. ಕಾಂಗ್ರೆಸ್ ಮನೆ ಬಾಗಿಲಿಗೆ ನಾವು ಹೋಗಲಿಲ್ಲ. ಜೆಡಿಎಸ್ ಗಾಗಿ ನಾವು ಯಾರ ಮನೆಯ ಬಾಗಿಲಿಗೂ ಹೋಗಲಿಲ್ಲ.ಬಿಜೆಪಿ‌ ನಾಯಕರು ನಮ‌್ಮ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾಡಬೇಕು ಎಂದರು.

ರಾಜ್ಯದ ಖಜಾನೆಯ ಜನರ ಹಣವನ್ನು ನಾನು ಸರ್ಕಾರ ಉಳಿಸಲು ಬಿಜೆಪಿ ಶಾಸಕರನ್ನು ಖರೀದಿಸಲು ಬಳಸಬಹುದಿತ್ತು. ಆದರೆ ನಾನೆಂದೂ ಬಿಜೆಪಿಯಂತೆ ವಾಮಮಾರ್ಗದ ರಾಜಕಾರಣ ಮಾಡಲಿಲ್ಲ. ನಾನು ಮನಸು ಮಾಡಿದ್ದರೆ ಹಣ ಕೊಟ್ಟು ಬಿಜೆಪಿ ಶಾಸಕರ‌ನ್ನು ಖರೀದಿಸಿ ಸರ್ಕಾರವನ್ನು ಉಳಿಸಿಕೊಳ್ಳಬಹುದಿತ್ತು ಎಂದರು.

ಮೈತ್ರಿ ಸರ್ಕಾರದಲ್ಲಿ ಜಾರಿಯಾಗಿರುವ ಸಾಲಮನ್ನಾ ಸೇರಿದಂತೆ ಜನಪರ‌ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಪ್ರಚುರ ಪಡಿಸುವ ಕೆಲಸಕ್ಕೆ ಕಾರ್ಯಕರ್ತರು ಮುಂದಾಗಬೇಕು. ಚುನಾವಣೆ ಯಾವಾಗ ಬೇಕಾದರೂ ಬರಬಹುದು.ಪಕ್ಷ‌ ಎದುರಿಸಲು ಸಿದ್ಧವಾಗಬೇಕು. ಕಾರ್ಯಕರ್ತರ ಜೊತೆ ಪಕ್ಷ ಸಂಘಟನೆಗೆ ಹಳ್ಳಿಹಳ್ಳಿಗೆ ತಾವು ಹೋಗಲು ಸಿದ್ಧ‌ ಎಂದು ಕುಮಾರಸ್ವಾಮಿ ಹೇಳಿದರು.

ಆರ್‌ಎಸ್‌ಎಸ್, ವಿಹಿಂಪ ದೃಷ್ಟಿಯಲ್ಲಿ ಲಿಂಗಾಯತರು,‌ ಒಕ್ಕಲಿಗರೂ ಶೂದ್ರರೇ
ರಾಜಾಹುಲಿ ಯಡಿಯೂರಪ್ಪ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಮುಖ್ಯಮಂತ್ರಿಯ ಕಥೆ ಕೇಂದ್ರದ ನಾಯಕರ ಮನೆ ಮುಂದೆ ಕಾಯುವುದೇ ಆಗಿದೆ. ಯಡಿಯೂರಪ್ಪದು ಕೇಂದ್ರದ ನಾಯಕರ ಮನೆ ಮುಂದೆ ಗುರುತಿನ‌ಚೀಟಿ ತೋರಿಸುವ ದೌರ್ಭಾಗ್ಯ. ಇದು ಒಂದು ಮುಖ್ಯಮಂತ್ರಿ ಸ್ಥಾನವೇ? ಎಂದು ಕುಟುಕಿದರು.

ಲಿಂಗಾಯತ ಸಮುದಾಯದಿಂದ ನಮ್ಮನ್ನು ಅಂತ್ಯಗೊಳಿಸಬಹುದೆಂದು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಲ್ಲಿ ಲಿಂಗಾಯತ ಸಮುದಾಯದವರ ಸ್ಥಿತಿ ಏನಾಗಿದೆ . ಇದನ್ನು ಬಸವಣ್ಣ ಮೆಚ್ಚುತ್ತಾನೆಯೇ? ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹೋರಾಟಕ್ಕೆ ಸಿದ್ಧವಾಗಿಲ್ಲ ಎಂದು ಸೂಚ್ಯವಾಗಿ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ತಿವಿದರು.

ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಇಂದಿಗೂ ಜೆಡಿಎಸ್ ಉಳಿಸಿದ್ದು ಕಾರ್ಯಕರ್ತರೆ. ಜನರಿಗಾಗಿ ಬಿಜೆಪಿಯ ವಿರುದ್ಧದ ಹೋರಾಟಕ್ಕೆ ನಿಲ್ಲುವ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದರು.


ಸಿಎಎ ಮೂಲಕ ಹಕ್ಕಬುಕ್ಕ ಮೋದಿ - ಶಾ ಬರೀ ಮುಸ್ಲಿಂರನ್ನಷ್ಟೇ ಗುರಿಯಾಗಿಸಿಕೊಂಡಿಲ್ಲ. ಇದರಿಂದ ಹಿಂದೂಗಳಿಗೂ ಅಪಾಯವೇ. ಹಿಂದೂ ಎಂದು ಕೇವಲ ಹೇಳುತ್ತಾರಷ್ಟೆ. ದಲಿತರನ್ನು ಬಾ ಎಂದು ಹಕ್ಕ ಬುಕ್ಕ ಹೇಳುವುದಿಲ್ಲ.ಇವರು ರಾಜಕಾರಣಕ್ಕೆ ಮಾತ್ರ ಹಿಂದೂಗಳು ಎನ್ನುತ್ತಾರೆ. ಇವರ ದೃಷ್ಟಿಯಲ್ಲಿ ಲಿಂಗಾಯತರು,‌ ಒಕ್ಕಲಿಗರು ಎಲ್ಲರೂ ಶೂದ್ರರೆ ಎಂದು ಹೇಳಿದರು.

ಆರ್‌ಎಸ್‌ಎಸ್,‌ ವಿಶ್ವ ಹಿಂದೂ ಪರಿಷತ್ ಇನ್ನೊಬ್ಬರ ಕೈಗೆ‌ ತ್ರಿಶೂಲ‌ ಕೊಟ್ಟು ವಿರೋಧಿಗಳನ್ನು ತಿವಿದು ನಂತರ ಅಧಿಕಾರ ಅನುಭವಿಸುತ್ತಾರೆ. ಜನರ ಮುಂದೆ ಹೋಗಲು ಬಿಜೆಪಿ,‌ ಕಾಂಗ್ರೆಸ್ ನಂತೆ ಸುಳ್ಳು ಹೇಳುವುದಿಲ್ಲ. ಜನರ ಮುಂದೆ ಮತಯಾಚಿಸಲು ಜೆಡಿಎಸ್‌ಗೆ ನೈತಿಕತೆ ಇದೆ. ಯಾವುದೇ ಪಕ್ಷದ ಹಂಗಿಲ್ಲದೇ ಸ್ವಂತಿಕೆಯಿಂದ ಪಕ್ಷ ಕಟ್ಟಲು ಸಿದ್ಧತೆ‌ ನಡೆಸುತ್ತಿದ್ದೇನೆ. ನಾನು ಸೋತು ಸಮ್ಮನೆ ಕುಳಿತಿಲ್ಲ. ಹಿಂದೂ ಮುಸ್ಲಿಂ ಎನ್ನುವ ಜಾತಿ ನನಗಿಲ್ಲ. ಬಡವರು ರಾಜ್ಯದ ಜನರೆಲ್ಲರೂ ನನ್ನ ಜಾತಿಯೇ ಎಂದು ಕುಮಾರಸ್ವಾಮಿ ಜಾತ್ಯತೀತ ಭಾವ ತೋರಿದರು.

ಸಿಎಎ ವಿರೋಧಿಸಿ ಜೆಡಿಎಸ್ ಮನೆಮನೆಗೆ ಅಭಿಯಾನ:
ಸಿಎಎ ಬೆಂಬಲಿಸಿ ಎಂದು ಅಮಿತ್ ಶಾ ಹ್ಯಾಂಡ್ ಬಿಲ್ ಹಿಡಿದು ಹೊರಟಿದ್ದಾರೆ. ಆದರೆ ನಿಜವಾಗಿಯೂ ಸಿಎಎ ಗುರಿ ಏನು? ಕೇಂದ್ರದ ಉದ್ದೇಶ ಏನು ಎಂಬುದನ್ನು ಪ್ರಚುರ ಪಡಿಸಲು‌ ಸಿಎಎ ವಿರೋಧಿಸಿ ಮನೆಮನೆಗೆ ಅಭಿಯಾನ ಮಾಡಲಾಗುವುದು‌‌. ಈ ಬಗ್ಗೆ ಕರಪತ್ರ ಸಿದ್ಧಗೊಳಿಸಿ‌ ದಿನಾಂಕ ನಿಗದಿಪಡಿಸಲು ವೈ.ಎಸ್‌ವಿ ದತ್ತಾ ಅವರಿಗೆ ಕುಮಾರಸ್ವಾಮಿ ಜವಾಬ್ದಾರಿ ವಹಿಸಿದರು.

SCROLL FOR NEXT