ರಾಜಕೀಯ

ಮಂತ್ರಿಮಂಡಲ ವಿಸ್ತರಣೆ: ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ: ಶ್ರೀರಾಮುಲು

Srinivasamurthy VN

ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಸಂಪುಟ ವಿಸ್ತರಣೆ ವಿಚಾರವಾಗಿ ಅವರು ನೀಡಿದ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಪರಾಜಿತರಾದ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಯಡಿಯೂರಪ್ಪ ಅವರು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆಯೂ ಚರ್ಚೆ ನಡೆಸಿದ್ದು, ಆದಷ್ಟು ಬೇಗ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ತಾವು ಉಪಮುಖ್ಯಮಂತ್ರಿ ಆಗಬೇಕು ಎನ್ನುವುದು ಜನರ ಬೇಡಿಕೆಯಾಗಿದ್ದು ಅವರ ಬೇಡಿಕೆಯನ್ನು ತಾವು ಅಲ್ಲಗೆಳೆಯಲು ಹೋಗುವುದಿಲ್ಲ. ತಮಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ‌ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ತಾವೂ ಕೂಡ ಎಲ್ಲರಂತೆ ನಿರೀಕ್ಷೆ ಹೊಂದಿರುವುದಾಗಿ ಮಾರ್ಮಿಕವಾಗಿ ನುಡಿದರು. 

'ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೊಟ್ಟ ಮಾತು ಎಂದೂ ತಪ್ಪಲ್ಲ. ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ. ಸೋತವರಿಗೆ ಸಚಿವರನ್ನಾಗಿ ಮಾಡುವ ಬೇಡಿಕೆ ವಿಚಾರದ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸಿಎಂ ಕೈಬಿಡಲ್ಲ.  ಶ್ರೀರಾಮುಲು ಡಿಸಿಎಂ ಆಗಬೇಕು ಅನ್ನೋದು ಜನರ ಬೇಡಿಕೆಯಿದೆ. ರಾಜ್ಯದ ಸಾಮಾನ್ಯ ಜನರ ಬೇಡಿಕೆಯನ್ನ ನಾನು ಅಲ್ಲಗೆಳೆಯಲು ಹೋಗುವುದಿಲ್ಲ. ಈ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರೆಲ್ಲ ಏನು ತೀರ್ಮಾನ ಕೈಗೊಳ್ತಾರೋ ಕಾದು ನೋಡೋಣ ಎಂದರು.

SCROLL FOR NEXT