ರಾಜಕೀಯ

ಕೊರೋನಾ ಸಂಕಷ್ಟದ ನಡುವೆಯೂ ಮುಳ್ಳಯ್ಯನ ಗಿರಿ ರೆಸಾರ್ಟ್ ನಲ್ಲಿ ಬಿಜೆಪಿ ಸಚಿವರ ಗುಪ್ತಸಭೆ?

Shilpa D

ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರಿಗೆ ಬಹುತೇಕ ಆಸ್ಪತ್ರೆಗಳಲ್ಲಿ ರಾಜಧಾನಿಯಲ್ಲಿ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕೇಸರಿ ಪಕ್ಷದ ಪ್ರಭಾವಿ ನಾಯಕರು ಕಾಫಿನಾಡಿನ ರೆಸಾರ್ಟ್ ವೊಂದರಲ್ಲಿ ಸಭೆ ಸೇರಿ ರಹಸ್ಯ ಮೀಟಿಂಗ್ ಮಾಡಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬರೀ ಕುತೂಹಲ ಮಾತ್ರವಲ್ಲದೇ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರೋ ರೆಸಾರ್ಟ್​ವೊಂದರಲ್ಲಿ ಕೆಲ ಸಚಿವರು, ಶಾಸಕರು, ಮುಖಂಡರು ರಹಸ್ಯ ಸಭೆ ಮಾಡಿದ್ದಾರೆ ಎಂದು ಮಾಧ್ಯಮಗಳು   ವರದಿ ಮಾಡಿವೆ. ಈ ಸಭೆಗೆ ಸದ್ಯ ಬೆಂಗಳೂರಿನ ಕೊರೊನಾ ಉಸ್ತುವಾರಿಯಾಗಿರೋ ಆರ್ ಅಶೋಕ್, ಸಿ.ಟಿ. ರವಿ, ಜಗದೀಶ್ ಶೆಟ್ಟರ್, ಈಶ್ವರಪ್ಪ ಹಾಜರಾಗಿದ್ದು ವಿಶೇಷ. ಅಲ್ಲದೇ
ಸತೀಶ್ ರೆಡ್ಡಿ, ಮುನಿರಾಜು, ಕೃಷ್ಣಪ್ಪ ಸೇರಿದಂತೆ  ಕೆಲ ಪ್ರಭಾವಿ ನಾಯಕರು ರಾತ್ರೋರಾತ್ರಿ ಹಾಜರಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎಂದು ಹೇಳಲಾಗಿದೆ.

ಎಲ್ಲ ಸಚಿವರು ಒಟ್ಟಿಗೆ ಸೇರಿಲ್ಲ. ಅಶೋಕ್‌, ಜಗದೀಶ್‌ ಶೆಟ್ಟರ್‌ ಪ್ರತ್ಯೇಕ ಕಡೆ ವಾಸ್ತವ್ಯ ಇದ್ದರು. ನಮ್ಮ ಮನೆಯಲ್ಲಿ ನಾನಿದ್ದೆ. ಇಲ್ಲಿ ಒಟ್ಟಾಗಿ ಯಾವುದೇ ಗುಪ್ತ ಸಭೆ ನಡೆಸಿಲ್ಲ’ ಎಂದು ಜಿಲ್ಲಾ ಉಸ್ತುವಾರ ಸಚಿವ ಸಿ.ಟಿ. ರವಿ ಸ್ಪಷ್ಟಪಡಿಸಿದರು. 

ಹಲವು ಸಚಿವರು ಒಟ್ಟಾಗಿ ನಗರದಲ್ಲಿ ಬುಧವಾರ ರಾತ್ರಿ ಸಭೆ ನಡೆಸಿದ್ದಾರೆಂಬ ಮಾಧ್ಯಮಗಳ ವರದಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಸಚಿವ ಈಶ್ವರಪ್ಪ ಕೂಡ ಇಲ್ಲಿಗೆ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು. ‘ಸಚಿವರು ಜಿಲ್ಲಾ ಪ್ರವಾಸದಲ್ಲಿ ಇದ್ದೇವೆ. ಕೈಗಾರಿಕೆಗಳ ಕುರಿತು ಚರ್ಚಿಸಲು ಬಂದ್ದಿದ್ದೇನೆ. ಸಚಿವ ಆರ್‌.ಅಶೋಕ್‌ ಮಾಮೂಲಿಯಾಗಿ ಇಲ್ಲಿಗೆ ಬಂದಿದ್ದಾರೆ, ಇದರಲ್ಲಿ ವಿಶೇಷ ಏನಿಲ್ಲ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಕೂಡ ಹೇಳಿದರು. 

ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಆರ್ ಅಶೋಕ್ ಕೂಡ ತಾವು ಯಾವುದೇ ಗುಪ್ತಸಭೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಪ್ರಭಾವಿ ಸಚಿವರುಗಳೆಲ್ಲಾ ಒಟ್ಟಾಗಿ ಸೇರಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

SCROLL FOR NEXT