ರಾಜಕೀಯ

ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರೀಟ ಅರ್ಪಿಸಿದರೂ ಜೈಲಿಗೆ ಹೋಗುವುದು ತಪ್ಪಲಿಲ್ಲ: ರಾಮುುಲುಗೆ ಸಿದ್ದರಾಮಯ್ಯ ಟಾಂಗ್

Lingaraj Badiger

ಬೆಂಗಳೂರು: ಕೊರೋನಾ ಸೋಕಿನಿಂದ ಜನರನ್ನು ಪಾರು ಮಾಡಲು ಸಾಧ್ಯವಿಲ್ಲ ಎನ್ನುವವರು ಅಧಿಕಾರದಲ್ಲಿ ಇರಲು ಅರ್ಹರಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆರೋಗ್ಯ ಸಚಿವ ಶ್ರೀರಾಮುಲು ಅವರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೊರೋನಾದಿಂದ ಜನರನ್ನು ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಕೊರೋನಾ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಈಗ ದೇವರೇ ದಿಕ್ಕು ಎಂದರೆ ಹೇಗೆ? ಇಂತಹ ಅಸಹಾಯಕ ಹೇಳಿಕೆ ನೀಡಿರುವ ಶ್ರೀರಾಮುಲಿ ಆರೋಗ್ಯ ಸಚಿವ ಸ್ಥಾನದಲ್ಲಿ ಮುಂದುವರೆಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಸರ್ಕಾರದಲ್ಲಿ ಸಂಪನ್ಮೂಲವಿದೆ. ಕೈಯ್ಯಲ್ಲಿ ಅಧಿಕಾರ ಎಲ್ಲವೂ ಇದ್ದು ಯಾವುದೇ ಪ್ರಯತ್ನ ಮಾಡದೇ ಶ್ರೀರಾಮುಲು ದೇವರೇ ದಿಕ್ಕು ಎನ್ನುವುದು ಸರಿಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೊರೋನಾ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಈಗ ದೇವರೇ ದಿಕ್ಕು ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ, ಜನದ್ರೋಹಿಗಳನ್ನು, ಭ್ರಷ್ಟರನ್ನು ದೇವರು ಕೂಡ ಕಾಪಾಡಲಾರ ಎಂದು ಲೇವಡಿ ಮಾಡಿದ್ದಾರೆ.

ಈಗಲೂ ರಾಜ್ಯದ ಜನರನ್ನು ಕಾಪಾಡುತ್ತಿರುವುದು ದೇವರೇ ವಿನಃ ಸರ್ಕಾರವಲ್ಲ. ಆದರೆ, ಜನದ್ರೋಹಿಗಳನ್ನು, ಭ್ರಷ್ಟರನ್ನು ಆ ದೇವರು ಕೂಡ ಕಾಪಾಡಲಾರ. ನಿಮ್ಮನ್ನು ದೇವರು ಕಾಪಾಡುತ್ತಾನೆ ಎಂಬ ನಿರೀಕ್ಷೆಯೂ ಬೇಡ. ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರೀಟ ಅರ್ಪಿಸಿದರೂ ಭ್ರಷ್ಟರು ಜೈಲಿಗೆ ಹೋಗುವುದು ತಪ್ಪಲಿಲ್ಲ ಎಂಬುದನ್ನು ಮರೆಯಬೇಡಿ ಎಂದು ಶ್ರೀರಾಮುಲುಗೆ ಟ್ವೀಟ್ ಮೂಲಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT