ರಾಜಕೀಯ

ಸಿ.ಪಿ.ಯೋಗೇಶ್ವರ್, ಎಚ್. ವಿಶ್ವನಾಥ್ ಸೇರಿ ಐವರು ವಿಧಾನ ಪರಿಷತ್ ಗೆ ನಾಮನಿರ್ದೇಶನ

Lingaraj Badiger

ಬೆಂಗಳೂರು: ಒಂದು ವರ್ಷದ ಹಿಂದೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಪತಕ್ಕೆ ಕಾರಣವಾಗಿದ್ದ ಮಾಜಿ ಶಾಸಕ ಎಚ್. ವಿಶ್ವನಾಥ್ ಹಾಗೂ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸೇರಿದಂತೆ ಐವರನ್ನು ರಾಜ್ಯ ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಲಾಗಿದೆ.

ಎಚ್ ವಿಶ್ವನಾಥ, ಸಿ. ಪಿ ಯೋಗೇಶ್ವರ್, ಭಾರತಿ ಶೆಟ್ಟಿ, ಸಾಯಿಬಣ್ಣ ತಳವಾರ, ಶಾಂತಾರಾಂ ಸಿದ್ದಿ ಅವರನ್ನು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಬುಧವಾರ ಆದೇಶ ಹೊರಡಿಸಿದ್ಧಾರೆ. 

ಸಾಹಿತ್ಯ ಕ್ಷೇತ್ರದಿಂದ ಎಚ್​. ವಿಶ್ವನಾಥ್​​​, ಸಿನಿಮಾ ಕ್ಷೇತ್ರದಿಂದ ಸಿ.ಪಿ ಯೋಗೇಶ್ವರ್​​, ಸಮಾಜ ಸೇವೆ ಕ್ಷೇತ್ರದಿಂದ ಭಾರತಿ ಶೆಟ್ಟಿ, ಶಿಕ್ಷಣ ಕ್ಷೇತ್ರದಿಂದ ಸಾಬಣ್ಣ ತಳವಾರ, ಬುಡಕಟ್ಟು ಕ್ಷೇತ್ರದಿಂದ ಶಾಂತಾರಾಂ ಸಿದ್ದಿ ಅವರನ್ನು ರಾಜ್ಯ ಸರ್ಕಾರ ವಿಧಾನ ಪರಿಷತ್​​ಗೆ ನಾಮನಿರ್ದೇಶನ ಮಾಡಿದೆ.

ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಸೂಚನೆಯಂತೆ ಎಚ್ ವಿಶ್ವನಾಥ್ ಹಾಗೂ ಸಿ.ಪಿ.ಯೋಗೇಶ್ವರ್ ಅವರನ್ನು ಹಾಗೂ ಸಂಘದ ಹಿನ್ನೆಲೆಯ ಮೂವರನ್ನು ಪರಿಷತ್​​ಗೆ ನಾಮನಿರ್ದೇಶನ ಮಾಡಲಾಗಿದೆ.

ರಾಜ್ಯಪಾಲರು ಭಾರತೀ ಶೆಟ್ಟಿ,ಸಿ.ಪಿ.ಯೋಗೀಶ್ವರ್,ಎಚ್.ವಿಶ್ವನಾಥ್ ನೇಮಕಕ್ಕೆ ಅನುಮೋದನೆ ನೀಡಲು ಒಪ್ಪಿಗೆ ನೀಡರಲಿಲ್ಲ ಎನ್ನಲಾಗಿದೆ. ಹೀಗಾಗಿ ಇಂದು ಬೆಳೆಗ್ಗೆ ರಾಜಭವನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ರಾಜ್ಯ ಪಾಲರ ಜೊತೆ ಚೆರ್ಚಿಸಿ ರಾಜಕೀಯ ವ್ಯಕ್ತಿಗಳ ನೇಮಕಕ್ಕೂ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. 

ಇತ್ತೀಚಿಗೆ ನಿವೃತ್ತಿ ಹೊಂದಿದ್ದ 9 ವಿಧಾನ ಪರಿಷತ್ ಸದಸ್ಯರ ಚುನಾವಣೆ ವೇಳೆ ಎಚ್.ವಿಶ್ವನಾಥ್ ಹಾಗೂ ಸಿ.ಪಿ. ಯೋಗೇಶ್ವರ್ ಗೆ ಟಿಕೆಟ್ ಕೈತಪ್ಪಿತ್ತು. ಆದರೆ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಪಕ್ಷದ ನಾಯಕರು ಅವಕಾಶ ನೀಡಿದ್ದರು.

SCROLL FOR NEXT