ರಾಜಕೀಯ

ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪ: ಸಿದ್ದು, ಡಿಕೆಶಿಗೆ ನೋಟಿಸ್ ನೀಡಿದ ಬಿಜೆಪಿ

Nagaraja AB

ಬೆಂಗಳೂರು: ಕೋವಿಡ್ 19 ನಿಯಂತ್ರಣಕ್ಕಾಗಿ ಖರೀದಿಸಲಾಗಿರುವ ಉಪಕರಣಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸಾರ್ವಜನಿಕ ತಿಳಿವಳಿಕೆ ಪತ್ರವನ್ನು (ಲೀಗಲ್ ನೋಟೀಸ್)ನೀಡಿದ್ದು 15 ದಿನದಲ್ಲಿ ಉತ್ತರ ನೀಡಬೇಕು ಹಾಗೂ ಬಹಿರಂಗವಾಗಿ ಸಾರ್ವಜನಿಕರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್,ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರೈಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ
ಆದರೆ, ಪ್ರತಿಪಕ್ಷ ಕಾಂಗ್ರೆಸ್ ಗೆ ಹೊಟ್ಟೆ ಉರಿ ಶುರು ವಾಗಿದ್ದು, ಹೊಟ್ಟೆ ಉರಿ ಸಹಿಸದೇ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದಾರೆ.  ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಆರೋಪ ಪ್ರತ್ಯಾರೋಪ ಮಾಡಿ ಬಿಜೆಪಿ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಕೋವಿಡ್ ಉಪಕರಣ ಖರೀದಿ ಮಾಹಿತಿ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಆರೋಗ್ಯ ಇಲಾಖೆ  ಅಪರ ಮುಖ್ಯ ಪ್ರಧಾನ ಕಾರ್ಯ ದರ್ಶಿ ಹಾಗೂ ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿ ಅವರಿಗೆ 20 ಪತ್ರ ಬರೆದರು ಒಂದಕ್ಕೂ ಉತ್ತರ ನೀಡಿಲ್ಲ ಎಂದು ಅವರೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.ಹಾಗಾದರೆ ಅಂಕಿ ಅಂಶಗಳನ್ನು ಇಟ್ಟು ಕೊಂಡು 4000 ಕೋಟಿ ಖರ್ಚಾಗಿದೆ ಎಂದು ಹೇಗೆ ಹೇಳಿದ್ದೀರಿ,2000 ಕೋಟಿ ಅಕ್ರಮವಾಗಿದೆ ಎಂದು ಯಾವ ಆಧಾರದ ಮೇಲೆ ಆರೋಪಸಿದ್ದೀರಿ..? ಎಂದು ರವಿ ಕುಮಾರ್ ಪ್ರಶ್ನಿಸಿದ್ದಾರೆ.

ಅಲ್ಲದೆ ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಲೀಗಲ್ ನೋಟೀಸನ್ನು ನೀಡಿರುವುದಾಗಿ ದಾಖಲೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ಸರಿಯಾದ ಮಾಹಿತಿ ಇಲ್ಲದೆ 4467 ಕೋಟಿ ಖರ್ಚು ಮಾಡಿ 2000 ಕೋಟಿ ಅಕ್ರಮ ಎಂದು ಹೇಳಿಕೆ ನೀಡಿ ಸರ್ಕಾರಕ್ಕೆ ಕೆಟ್ಟ
 ಹೆಸರು ತರುವ ಪ್ರಯತ್ನ ಮಾಡಿದ್ದಾರೆ ಎನ್ನುವ ಅಂಶವನ್ನು ನೋಟಿಸ್ ನಲ್ಲಿ ಪ್ರಸ್ತಾಪಿಸಲಾಗಿದೆ.ಸಾರ್ವಜನಿಕ ತಿಳಿವಳಿಕೆ ಪತ್ರವನ್ನು ಮಾಧ್ಯಮಗಳ ಮೂಲಕವೂ ಬಿಡುಗಡೆ ಮಾಡಲಾಗಿದ್ದು, ಸತ್ಯಕ್ಕೆ ದೂರವಾದ ಹೇಳಿಕೆ ನೀಡಿ ಆರೋಪ ಮಾಡಿರುವ ಬಗ್ಗೆ ಕಾರಣ ಕೇಳಿ ಲೀಗಲ್ ನೋಟಿಸ್ ನೀಡಲಾಗಿದೆ. 15 ದಿನದಲ್ಲಿ ನೋಟಿಸ್ ಗೆ ಸಾರ್ವಜನಿಕವಾಗಿ ಉತ್ತರ ನೀಡಬೇಕು ಹಾಗೂ ಬಹಿರಂಗವಾಗಿ ಕ್ಷಮೆ ಕೇಳಬೇಕು ಇಲ್ಲದೇ ಇದ್ದಲ್ಲಿ ಕಾನೂನಾತ್ಮಕ ಹೋರಾಟವನ್ನುಮುಂದುವರೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮಾಡಿರುವ ಆರೋಪಗಳನ್ನು ಐದು ಜನ ಸಚಿವರು ಪತ್ರಿಕಾಗೋಷ್ಟಿ  ನಡೆಸಿ ಅಲ್ಲಗಳೆದಿದ್ದಾರೆ.ಈ ಸಂಬಂಧ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಿದ್ದರೂ ಮತ್ತೆ ಮತ್ತೆ ಅವ್ಯವಹಾರ ನಡೆಸಲಾಗಿದೆ ಎಂದು ಜನರನ್ನು ಧಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.ಆಮೂಲಕ ಬಿಜೆಪಿ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವಂತಹ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ.ಸಾರ್ವಜನಿಕರ ವಲಯದಲ್ಲಿ ಸರ್ಕಾರದ ಸಾಧನೆಗಳನ್ನು,ಅಭಿವೃದ್ದಿಯನ್ನು ಸಹಿಸದೆ ಆಧಾರ ರಹಿತ ಕೀಳು ಆರೋಪಗಳನ್ನು ಮಾಡುವ ಮೂಲಕ ರಾಜ್ಯದ ಜನರ ಭಾವನೆಗಳನ್ನು ಕೆರಳಿಸುವ ಕೆಲಸವು ಇದಾಗಿದೆ.ಹೀಗಾಗಿ ಲೀಗಲ್ ನೋಟೀಸ್ ನೀಡಲಾಗುತ್ತಿದೆ ಎಂದು ಅವರು ಹೇಳಿದರು. 

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಭ್ರಮನಿರಸವಾಗಿದೆ ಹೀಗಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ.ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಆದರೆ ಹಿಂದೆ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದುಬಾರಿ ಬೆಲೆಯ ಹ್ಯೂಬ್ಲೋಟ್ ವಾಚ್ ಉಡುಗೊರೆ ಪಡೆದ ಬಗ್ಗೆ ಮಾಹಿತಿ ಕೊಟ್ಟಿದೆ ಅದನ್ನು ತನಿಖೆ ಕೊಟ್ಟಿದ್ದರು ಎಂದು ಅವರು ಪ್ರಶ್ನಿಸಿದರು.

ಮಾತೆತ್ತಿದರೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎನ್ನುತ್ತೀರಿ ಡಿಕೆ ಶಿವಕುಮಾರ್ ದೆಹಲಿಗೆ ಪಿಕ್ನಿಕ್ ಹೋಗಿದ್ದರೂ ? ಟೂರ್ ಹೋಗಿದ್ದರಾ ಎಂದು ಕಿಡಿಕಾರಿರುವ ರವಿ ಕುಮಾರ್, ಸಿದ್ದರಾಮಯ್ಯನವರು ಯಾವ ನೈತಿಕತೆ ಇಟ್ಟುಕೊಂಡು ಡಿಕೆ ಶಿವಕುಮಾರ್ ಪಕ್ಕದಲ್ಲಿ ಕೋರುತ್ತಿದ್ದೇವೆ ಯಾವ ನೈತಿಕತೆ ಇಟ್ಟುಕೊಂಡು ಡಿಕೆ ಶಿವಕುಮಾರ್ ಜೊತೆ ಸೇರಿ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ತಿರುಗೇಟು ನೀಡಿದರು. 

2013ರಲ್ಲಿ ಇದ್ದ ಡಿಕೆ ಶಿವಕುಮಾರ್ ಆಸ್ತಿ 2018ರ ವೇಳೆಗೆ ದುಪ್ಪಟ್ಟಾಗಿದೆ ಡಿಕೆ ಶಿವಕುಮಾರ್ ಹೇಗೆ ದುಪ್ಪಟ್ಟು ಆಸ್ತಿ ಮಾಡಿಕೊಂಡಿದ್ದಾರೆ. ನಿಮ್ಮ ಆಸ್ತಿ ಗಳಿಕೆಯ ರಹಸ್ಯವನ್ನು ನಮಗೂ ತಿಳಿಸಿ ಎಂದು ಲೇವಡಿ ಮಾಡಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಮಾಧ್ಯಮ ವಕ್ತಾರ ಅಶ್ವಥ್ ನಾರಾಯಣ್ ,ಆರಂಭದಲ್ಲಿ ಸಚಿವ ಶ್ರೀರಾಮುಲು ಹಾಗೂ
 ಡಿಸಿಎಂ ಅಶ್ವಥ್ ನಾರಾಯಣ್ ಈರ್ವರು ಪತ್ರಿಕಾಗೋಷ್ಠಿ ಮಾಡಿ ತಮ್ಮ ಇಲಾಖೆಯಲ್ಲಿ ಕೇವಲ 350 ಕೋಟಿರೂ ಖರ್ಚಾಗಿದೆ ಎಂದು ಮಾಹಿತಿ ನೀಡಿದರು.ಬಳಿಕ ಐದು ಜನ ಸಚಿವರು ತಮ್ಮ ಇಲಾಖೆಗಳಲ್ಲಿ ಆಗಿರುವ ಖರ್ಚುವೆಚ್ಚಗಳ ಮಾಹಿತಿ ನೀಡಿದ್ದಾರೆ.ಕೋವಿಡ್ ರಾಜ್ಯದಲ್ಲಿ ಕಾಣಿಸಿಕೊಂಡಾಗ ಪಿಪಿಇ ಕಿಟ್ ಹಾಗೂ ವೆಂಟಿಲೇಟರ್ ತುರ್ತು ಅಗತ್ಯತೆ ಹಿನ್ನಲೆಯಲ್ಲಿ ಉಪಕರಣಗಳಲ್ಲಿ ಖರೀದಿಸಲಾಗಿದೆ.ಆರಂಭದಲ್ಲಿ ಏಡ್ಸ್ ಸೋಂಕಿತರ ಚಿಕಿತ್ಸೆಗೆ ಬಳಸುತ್ತಿದ್ದ ಪಿಪಿಇ ಕಿಟ್ ಖರೀದಿಸಿರುವುದು ಸತ್ಯ.ಬಳಿಕ 6 ಕಾಪೋನೆಂಟಗಳನ್ನು ಒಳಗೊಂಡ ಪಿಪಿಇ ಕಿಟ್ ಖರೀದಿಸಲಾಗಿದೆ.ಇದರಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ದಾಖಲೆಗಳನ್ನು ಕೇಳಿದರೆ ಅಧಿವೇಶನದಲ್ಲಿ ಚೆರ್ಚೆ ನಡೆಸಲಿ ದಾಖಲೆಗಳ ಸಮೇತ ಸರ್ಕಾರ ಆರೋಪ ಗಳಿಗೆ ಉತ್ತರ ನೀಡಲಿದೆ.ಹಾದಿ ಬೀದಿಯಲ್ಲಿ ಮಾಹಿತಿ ಇಲ್ಲದೆ ಆರೋಪ ಮಾಡುವುದು ಮಾಜಿ ಮುಖ್ಯಮಂತ್ರಿಗೆ ಸರಿಯಾದುದಲ್ಲ ಎಂಬ ಕಾರಣಕ್ಕೆ ನೋಟೀಸ್ ನೀಡಲಾಗಿದೆ.ಮುಂದೆ ಅವರು ನೀಡುವ ಉತ್ತರ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಶ್ವಥ್ ನಾರಾಯಣ್ ತಿಳಿಸಿದರು. 

ಸಿ.ಪಿ.ಯೋಗೇಶ್ವರ್ ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ಸರಿ. ಇಬ್ಬರು ಶಾಸಕರಿದ್ದಾರೆ ಅವರ ಕ್ಷೇತ್ರಗಳಿಗೆ ಅಭಿವೃದ್ದಿಗೆ ಅನುದಾನ, ಕಾಮಗಾರಿಗಳಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರಬಹುದು ಆದರೆ ಯೋಗೀಶ್ವರ್ ಯಾವ ಕಾರಣಕ್ಕೆ ಈ ಆರೋಪ ಮಾಡಿದ್ದಾರೆ ಎಂಬುದನ್ನು ಅವರೇ ತಿಳಿಸಬೇಕೆಂದು ರವಿ ಕುಮಾರ್ ತಿಳಿಸಿದರು.

SCROLL FOR NEXT