ರಾಜಕೀಯ

ರಾಜ್ಯಸಭೆ ಚುನಾವಣೆ: ಸೋಲಿನ ಆತಂಕದಲ್ಲಿ ದೇವೇಗೌಡರು; ದೊಡ್ಡಗೌಡರ ನಡೆ ಇನ್ನೂ ನಿಗೂಢ!

Shilpa D

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ರಾಜಕೀಯ ತಂತ್ರಗಾರಿಕೆ ಆರಂಭವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಡೆ ಇನ್ನೂ ನಿಗೂಢವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋತು, ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡು ರಾಜಕೀಯವಾಗಿ ಸಂಕಷ್ಟದಲ್ಲಿರುವ ಗೌಡರು, ಮತ್ತೊಂದು ಪರಾಭವ, ಮತ್ತೊಂದು ಅಪಮಾನ ಎದುರಾದರೆ ಎನ್ನುವ ಆತಂಕದಲ್ಲಿದ್ದಾರೆ. ಹೀಗಾಗಿಯೇ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆ ಚುನಾವಣಾ ಅಖಾಡ ಪ್ರವೇಶಿಸುವ ಅಸಕ್ತಿ ಹೊಂದಿರುವ ಗೌಡರು, ಚುನಾವಣಾ ಕಣ ಪ್ರವೇಶಿಸುವುದನ್ನು ಇನ್ನೂ ಖಚಿತಪಡಿಸಿಲ್ಲ. ವಿಧಾನಪರಿಷತ್ತಿನ ಚುನಾವಣೆ ಹಾಗೂ ರಾಜ್ಯಸಭೆ ಚುನಾವಣೆ ಎರಡೂ ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿವೆ. ಕಾಂಗ್ರೆಸ್ ಬೆಂಬಲವಿಲ್ಲದೇ ರಾಜ್ಯಸಭೆ ಪ್ರವೇಶಿಸುವುದು ಸುಲಭ ಸಾಧ್ಯವಲ್ಲ.

ದೇವೇಗೌಡರು ರಾಜ್ಯಸಭೆ ಪ್ರವೇಶಿಸಿದರೆ, ಡಿ.ಕೆ.ಶಿವಕುಮಾರ್ – ಜೆಡಿಎಸ್ ಬಾಂಧವ್ಯ ಬಲವರ್ಧನೆಗೊಳ್ಳಲಿದೆ. ಮುಂದೆ ಮುಖ್ಯಮಂತ್ರಿಯಾಗುವ ಹಾದಿ ಸುಗಮವಾಗಲಿದೆ.  ಇದನ್ನು ಅರಿತಿರುವ ಗೌಡರು, ಕಾಂಗ್ರೆಸ್ ನಿಂದ, ಅದರಲ್ಲೂ ಏಐಸಿಸಿ
ಅಧ್ಯಕ್ಷೆ ಸೋನಿಯಾಗಾಂಧಿ ಅವರಿಂದ ಅಭಯ ಹಸ್ತ ಸಿಗುವವರೆಗೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಸಮ್ಮತಿ ಸೂಚಿಸುವ ಸಾಧ್ಯತೆಗಳಿಲ್ಲ. 

ಈಗಾಗಲೇ ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ತುಮಕೂರನ್ನು ಆರಿಸಿಕೊಂಡು ತಪ್ಪುಮಾಡಿದ್ದೇನೆ. ಕಾಂಗ್ರೆಸನ್ನು ನೆಚ್ಚಿಕೊಂಡು ತುಮಕೂರಿನಿಂದ ಸ್ಪರ್ಧಿಸಿ ಸೋತಿರುವ ಗಾಯ ಇನ್ನೂ ಹಸಿಯಾಗಿಯೇ ಇದೆ. ಹೀಗಾಗಿ ರಾಜ್ಯಸಭೆಗೆ ಗೆಲುವು ಪಕ್ಕಾ ಎಂಬುದು ಖಾತ್ರಿಯಾದ ಬಳಿಕವೇ ಸಮ್ಮತಿ ಸೂಚಿಸುವುದು ಸೂಕ್ತ ಎಂದು ಗೌಡರು ತಮ್ಮ ಬೆಂಬಲಿಗರ ಬಳಿ  ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಕಾಂಗ್ರೆಸ್ ನಡೆ ಅನುಮಾನಾಸ್ಪದವಾಗಿದ್ದರೆ ತಮ್ಮ ಬದಲು ಕುಪೇಂದ್ರ ರೆಡ್ಡಿ ಅವರನ್ನೇ ಅಭ್ಯರ್ಥಿ ಮಾಡುವ ಆಲೋಚನೆಯಲ್ಲಿದ್ದಾರೆ. ಜತೆಗೆ ಜೆಡಿಎಸ್ ಗೆ ಅಡ್ಡಮತದಾನ ಭೀತಿಯೂ ಕಾಡುತ್ತಿದೆ. ರಾಜ್ಯ ಸಭೆ ಜತೆಗೆ ವಿಧಾನಪರಿಷತ್ ಚುನಾವಣೆಯೂ ಸಹ ಅಷ್ಟೇ ಮಹತ್ವ ಪಡೆದುಕೊಂಡಿದೆ. ರಾಜ್ಯಸಭೆಗೆ ಸ್ಪರ್ಧಿಸಿ ಮುಖಭಂಗ ಅನುಭವಿಸುವುದಕ್ಕಿಂತ ಕುಪೇಂದ್ರ ರೆಡ್ಡಿ ಅವರನ್ನೇ ಕಣಕ್ಕಿಳಿಸಿ ರಾಜ್ಯಸಭೆ ಮತ್ತು ವಿಧಾನಪರಿಷತ್ ಎರಡೂ ಸ್ಥಾನಗಳನ್ನು ಗೆಲ್ಲಿಸುವ ತಂತ್ರವನ್ನೂ ಗೌಡರು ರೂಪಿಸುತ್ತಿದ್ದಾರೆ  
ಎನ್ನಲಾಗಿದೆ. ಹೀಗಾಗಿ ಎಂದಿನಂತೆ ಅಳೆದುತೂಗಿ ಲಾಭನಷ್ಟದ ಲೆಕ್ಕಾಚಾರ ಸ್ಪಷ್ಟವಾದ ಬಳಿಕವೇ ತಮ್ಮ ಸ್ಪರ್ಧೆಯನ್ನು ಖಚಿತ ಮಾಡುವ ಯೋಜನೆ ಮತ್ತು ಯೋಚನೆಯನ್ನು ದೇವೇಗೌಡರು ಹೊಂದಿದ್ದಾರೆ.

SCROLL FOR NEXT