ರಾಜಕೀಯ

'ಹೌದು ಬ್ರದರ್ ಕೊರೋನಾ ಬಂದಿದ್ದಳು, ನೋಡಿದೆ ಎನ್ನುತ್ತಿದ್ದರು ಕುಮಾರಸ್ವಾಮಿ'

Shilpa D

ಬೆಂಗಳೂರು: ರಾಜ್ಯದಲ್ಲಿ ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರವಿದ್ದಿದ್ದರೆ ಕೋವಿಡ್ ಕಾಲದಲ್ಲಿ 50,000 ಜನ ಸಾವನ್ನಪ್ಪಿರುತ್ತಿದ್ದರು. ಏಕೆಂದರೆ ಸಮನ್ವಯವಿಲ್ಲದ ಸಮ್ಮಿಶ್ರ ಸರ್ಕಾರವಿರುತ್ತಿತ್ತು ಎಂದು‌ ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು. 

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಈ ಸಮಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರ ಇದ್ದಿದ್ದರೆ ಕನಿಷ್ಢ ಪಕ್ಷ 50 ಸಾವಿರ ಜನ ಸಾಯುತ್ತಿದ್ದರು. ಆದರೀಗ ಬಿಜೆಪಿ ಸರ್ಕಾರ ಇರುವುದರಿಂದ ಕೊರೋನಾ ವೈರಸ್​​ ಭಾರೀ ತಹಬದಿಗೆ ಬಂದಿದೆ ಎಂದರು. 

ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿಯವರಿಗೆ ಯಾರೋ ಬಂದು ಕೊರೋನಾ ಬಂದಿದೆ ಸರ್ ಅಂದಿದ್ದರೆ, ಹೌದು ಬ್ರದರ್ ಕೊರೋನಾ ಬಂದಿದ್ದಳು ನೋಡಿದೆ ಎನ್ನುತ್ತಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೇ ಯಾವ ಕೊರೋನಾನೂ ಇಲ್ಲ ನಡೀರಿ ಎಂದು ಗದರುತ್ತಿದ್ದರು. ಆದರೀಗ, ದೈವ ಭಕ್ತ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಹೀಗಾಗಿಯೇ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ ಕಾರಣ ಕೊರೋನಾ ವೈರಸ್​ ನಿಯಂತ್ರಣದಲ್ಲಿದೆ ಎಂದು ವಿಶ್ವನಾಥ್​​ ವ್ಯಂಗ್ಯವಾಡಿದ್ದಾರೆ.

ಸಮ್ಮಿಶ್ರ ಸರ್ಕಾರವಿದ್ದು ಜಮೀರ್ ಅಹಮ್ಮದ್ ಸಚಿವರಾಗಿರುತ್ತಿದ್ದರೆ ಈಗ ಏನಾಗುತ್ತಿತ್ತು? ಕಾಂಗ್ರೆಸ್ ಪಕ್ಷ ಮುಸ್ಲಿಮರ ಪಕ್ಷಪಾತಿ. ಹಾಗಾಗಿ ಯಾರನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕರ್ನಾಟಕದ ಸ್ಥಿತಿ ಅಮೆರಿಕದಂತೆ ಆಗಿಬಿಡುತ್ತಿತ್ತು. ಸಮ್ಮಿಶ್ರ ಸರ್ಕಾರದ  ಪತನದಿಂದ ಅದು ತಪ್ಪಿದೆ ಎಂದು ಹೇಳಿದರು.

SCROLL FOR NEXT