ರಾಜಕೀಯ

ಮಂಡ್ಯ ಹಾಲು ಒಕ್ಕೂಟ ಜೆಡಿಎಸ್‌ ಪಾಲು

Lingaraj Badiger

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನ ಜೆಡಿಎಸ್ ಪಾಲಾಗಿದೆ. ಜೆಡಿಎಸ್‌ ಬೆಂಬಲಿತ ನಿರ್ದೇಶಕ ವಿ.ಎಂ. ವಿಶ್ವನಾಥ್‌ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ನಿರ್ದೇಶಕ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಹಾಲು ಒಕ್ಕೂಟದಲ್ಲಿ ಜೆಡಿಎಸ್‌ -7, ಕಾಂಗ್ರೆಸ್‌ -3, ಬಿಜೆಪಿ-1, ಪಕ್ಷೇತರ-1 ಹಾಗೂ ಮೂವರು ಸರ್ಕಾರದ ನಾಮನಿರ್ದೇಶಿತ ನಿರ್ದೇಶಕರು ಇದ್ದಾರೆ. ಒಕ್ಕೂಟದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಕಾಂಗ್ರೆಸ್‌ ನಿರ್ದೇಶಕರ ಬೆಂಬಲ ಪಡೆದುಕೊಂಡರೂ ಅಧ್ಯಕ್ಷ ಸ್ಥಾನ ಪಟ್ಟಅಲಂಕರಿಸುವಲ್ಲಿ ಬಿಜೆಪಿ ಸಫಲವಾಗಲು ಸಾಧ್ಯವಾಗಲಿಲ್ಲ. ಅದೇ ರೀತಿ ಕೆಎಂಎಫ್‌ ನಿರ್ದೇಶಕ ಸ್ಥಾನವನ್ನೂ ಜೆಡಿಎಸ್‌ ವಶಕ್ಕೆ‌ಒಪ್ಪಿಸಿದೆ.

ಕಳೆದ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ ಉಂಟು ಮಾಡಲು ಚುನಾವಣೆ ದಿನ ಜೆಡಿಎಸ್‌ ರಣತಂತ್ರ ರೂಪಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ನಾಮನಿರ್ದೇಶಿತ ನಿರ್ದೇಶಕರೊಬ್ಬರು ಮತ ಚಲಾಯಿಸುವಂತೆ ಮಾಡಿದ್ದರು. ಪರಿಣಾಮ ಜೆಡಿಎಸ್‌ ಅಧ್ಯಕ್ಷ- ಉಪಾಧ್ಯಕ್ಷ ಪಟ್ಟ ಅಲಂಕರಿಸಿತ್ತು. ಆ ಸಮಯದಲ್ಲಿ ಸ್ವಾಮಿ ಅವರನ್ನು ಚುನಾವಣೆಯಲ್ಲಿ ಬೆಂಬಲಿಸಿದರೆ ಕೆಎಂಎಫ್‌ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುವುದಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದಿದ್ದ ರೂಪಾಗೆ ವರಿಷ್ಠರು ಭರವಸೆ ನೀಡಿದ್ದರು.

ಅದರಂತೆ ಕೆಎಂಎಫ್‌ ನಿರ್ದೇಶಕ ಸ್ಥಾನಕ್ಕೆ ರೂಪಾ ಅವರನ್ನೇ ಕಣಕ್ಕಿಳಿಸಿ ಗೆಲ್ಲಿಸಲು ಬಿಜೆಪಿ ನಿರ್ಧರಿಸಿತ್ತು. ನಾಮಪತ್ರ ಸಲ್ಲಿಸುವಂತೆ ರೂಪಾ ಅವರನ್ನು ಸಂಪರ್ಕಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡರು ಯತ್ನಿಸಿದ್ದರು.

ಮೂವರು ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು, ಮೂವರು ನಾಮ ನಿರ್ದೇಶಿತ ಸದಸ್ಯರು, ಪಕ್ಷೇತರ ಸೇರಿದಂತೆ ಬಿಜೆಪಿ ಬೆಂಬಲಿತ ನಿರ್ದೇಶಕರ ಬಲದೊಂದಿಗೆ ಬಿಜೆಪಿ ಹುದ್ದೆಗೇರಬಹುದಿತ್ತು. ಆದರೆ ಕೆಎಂಎಫ್‌ ನಿರ್ದೇಶಕ ಸ್ಥಾನವನ್ನು ಪ್ರತಿಷ್ಠೆಯಾಗಿ ಬಿಜೆಪಿ ಪರಿಗಣಿಸಲಿಲ್ಲವಾದ್ದರಿಂದ ವಿ.ಎಂ. ವಿಶ್ವನಾಥ್‌ ಸುಲಭವಾಗಿ ಹುದ್ದೆಗೇರುವಂತಾಯಿತು

SCROLL FOR NEXT