ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ದೇಶದ ಆಸ್ತಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

Vishwanath S

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ರಾಜ್ಯಕ್ಕೆ ಸೀಮಿತವಾದ ನಾಯಕರಾಗಿರದೇ ರಾಷ್ಟ್ರಕ್ಕೆ ಸೀಮಿತವಾದ ನಾಯಕ. ರಾಷ್ಟ್ರ ನಾಯಕನ ಗುಣವಿರುವ ಅವರು ದೇಶದ ಆಸ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಳೆದ ಐದು ವರ್ಷಗಳ ಕಾಲ ಅವರು ವಿರೋಧ ಪಕ್ಷದಲ್ಲಿದ್ದು ಮಾಡಿದ ಕಾರ್ಯ ಹಾಗೂ ಅವರ ಅನುಭವ ಅತ್ಯುತ್ತಮವಾದುದು. ಅದಕ್ಕೆ ಪರ್ಯಾಯವಿಲ್ಲ. ಅವರ ಕಾರ್ಯ ನೋಡಿ ದೇಶದ ಮೂಲೆ ಮೂಲೆಯಿಂದ ಬೇರೆ ಪಕ್ಷಗಳ ನಾಯಕರೂ ಕೂಡ ಖರ್ಗೆ ಅವರನ್ನು ರಾಜ್ಯಸಭೆಯಿಂದ ಆರಿಸಿ ಸಂಸತ್ತಿಗೆ ಕಳುಹಿಸಬೇಕು ಎಂದು ಒತ್ತಡ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರೆಲ್ಲರೂ ಕೂತು ಚರ್ಚೆ ನಡೆಸಿ ಖರ್ಗೆ ಅವರನ್ನು ಬೆಂಬಲಿಸುವ ಒಮ್ಮತದ ನಿರ್ಧಾರ ಕೈಗೊಂಡೆವು. ನಮ್ಮ ಒಮ್ಮತದ ನಿರ್ಧಾರವನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇದರಿಂದ ದೇಶದ ಎಲ್ಲ ಕಾರ್ಯಕರ್ತರಿಗೆ ಸಂತೋಷವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಿಂದ ಆಯ್ಕೆಯಾಗುವ ಖರ್ಗೆ ಅವರು ರಾಷ್ಟ್ರದ ಎಲ್ಲ ವರ್ಗದ ಜನರ ಸಮಸ್ಯೆಗೆ ಧ್ವನಿಯಾಗಿ ಹೋರಾಟ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. 

ನಮ್ಮ ಪಕ್ಷಕ್ಕೆ ಶಕ್ತಿಯಾಗಿರುವ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ಅವಕಾಶ ಮಾಡಿಕೊಟ್ಟ ಹೈಕಮಾಂಡ್ ನಾಯಕರಿಗೆ ಧನ್ಯವಾದ ಸಲ್ಲಿಸಲು ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.

SCROLL FOR NEXT