ರಾಜಕೀಯ

ಜೂನ್ 29 ಕ್ಕೆ ಮೇಲ್ಮನೆ ಚುನಾವಣೆ: 4 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ

Manjula VN

ಬೆಂಗಳೂರು: ರಾಜ್ಯಸಭೆ ಚುನಾವಣೆ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗವು ಘೋಷಣೆ ಮಾಡಿದ್ದು, ವಿಧಾನಸಭೆಯಿಂದ ವಿಧಾನಪರಿಷತ್'ಗೆ ತೆರವಾಗುವ 7 ಸ್ಥಾನಗಳಿಗೆ ಜೂ.29ಕ್ಕೆ ಚುನಾವಣೆ ನಿಗದಿಪಡಿಸಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ನಾಲ್ಕು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದು, ಈಗಾಗಲೇ ಆಕಾಂಕ್ಷಿಗಳ ರೇಸ್ ನಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿವೆ. 

ಕಾಂಗ್ರೆಸ್ ಪಕ್ಷದ ನಸೀರ್ ಅಹಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಹೆಚ್.ಎಂ.ರೇವಣ್ಣ, ಎನ್ಎಸ್ ಬೋಸರಾಜು, ಜೆಡಿಎಸ್ ಟಿಎ ಶರವಣ ಹಾಗೂ ಪಕ್ಷೇತರ ಶಾಸಕ ಡಿಯು ಮಲ್ಲಿಕಾರ್ಜುನ್ ಅವರ ಸದಸ್ಯತ್ವದ ಅವಧಿಯು ಜೂ.30ಕ್ಕೆ ಮುಕ್ತಾಯವಾಗಲಿಗೆ. ಈ ಹಿನ್ನೆಲೆಯಲ್ಲಿ ಆ ಸ್ಥಾನಗಳ ಭರ್ತಿಗೆ ಚುನಾವಣೆ ನಡೆಯಲಿದೆ. 

ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕಾಗಿ ತಮ್ಮ ಸಚಿವ ಹಾಗೂ ಶಾಸಕ ಸ್ಥಾನ ತೊರೆದು ವಲಸೆ ಬಂದಿರುವ ಎಸ್.ಶಂಕರ್, ಎಂಟಿಬಿ ನಾಗರಾಜ್ ಹಾಗೂ ಹೆಚ್.ವಿಶ್ವನಾಥ್ ಅವರ ಪೈಕಿ ಮೂವರಿಗೂ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ. 

7 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳು ಬಿಜೆಪಿಗೆ, ಎರಡು ಕಾಂಗ್ರೆಸ್ ಮತ್ತು ಇನ್ನುಳಿದ ಒಂದು ಸ್ಥಾನ ಜೆಡಿಎಸ್ ಪಕ್ಷದ ಪಾಲಾಗಲಿವೆ. 

ಪ್ರಸಕ್ತ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 223. ಎರಡು ಸ್ಥಾನಗಳು ತೆರವಾಗಿವೆ. ಈ 223 ಮಂದಿಯೂ ಮತ ಚಲಾಯಿಸಿದ್ದಲ್ಲಿ ಒಬ್ಬ ಅಭ್ಯರ್ಥಿ ಕನಿಷ್ಠ 29 ಮತಗಳನ್ನು ಗಳಿಸಬೇಕಾಗುತ್ತದೆ. ಇಲ್ಲಿ ಚಲಾವಣೆಗೊಳ್ಳುವ ಮತಗಳ ಆಧಾರದ ಮೇಲೆ ಒಬ್ಬ ಅಭ್ಯರ್ಥಿ ಕನಿಷ್ಠ ಇಂತಿಷ್ಟು ಮತಗಳನ್ನು ಪಡೆಯಬೇಕಾಗುತ್ತದೆ ಎಂದು ಮೂಗಳಿಂದ ತಿಳಿದುಬಂದಿದೆ. 

ಆದರೆ ತೆರವಾಗುವ 7 ಸ್ಥಾನಗಳ ಪೈಕಿ ಔದು ಕಾಂಗ್ರೆಸ್, ಒಂದು ಜೆಡಿಎಸ್ ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಹೀಗಾಗಿ ಈಗ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಲಿದೆ. ಒಂದೂ ಸ್ಥಾನ ಕಳೆದುಕೊಳ್ಳದೆ ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಐದು ಸ್ಥಾನ ಹೊಂದಿರುವ ಕಾಂಗ್ರೆಸ್ ಎರಡು ಸ್ಥಾನ ಗಳಿಸಲಿದ್ದು, 3 ಸ್ಥಾನ ಕಳೆದುಕೊಳ್ಳಲಿದೆ. ಜೆಡಿಎಸ್ ಒಂದು ಸ್ಥಾನ ಹೊಂದಿದ್ದು, ಅದನ್ನು ಉಳಿಸಿಕೊಳ್ಳಲಿದೆ. 

SCROLL FOR NEXT