ರಾಜಕೀಯ

ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಕುಂದುಕೊರತೆ ನಿವಾರಿಸಿ: ಸಚಿವರಿಗೆ ಸಿಎಂ ಯಡಿಯೂರಪ್ಪ ಪತ್ರ

Manjula VN

ಬೆಂಗಳೂರು: ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳು ಹಾಗೂ ಜಿಲ್ಲೆಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಿ, ಸಮಸ್ಯೆಗಳನ್ನು ನಿವಾರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲಾ ಸಚಿವರಿಗೂ ಪತ್ರ ಬರೆದು ಸೂಚಿಸಿದ್ದಾರೆ. 

ಪತ್ರದಲ್ಲಿ, ಸಚಿವರು ಕೈಗೊಳ್ಳುವ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಚಿವರ ಆಪ್ತ ಸಿಬ್ಬಂದಿ ಆಯಾ ಕ್ಷೇತ್ರಗಳ ಶಾಸಕರು ಹಾಗೂ ಪಕ್ಷದ ಜಿಲ್ಲಾ ಕಚೇರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಸಚಿವರು ಕೈಗೊಳ್ಳುವ ಪ್ರವಾಸದ ಕಾರ್ಯಕ್ರಮವನ್ನು ಎಲ್ಲರ ಗಮನಕ್ಕೆ ತರುವುದಲ್ಲದೆ, ಆಯಾ ವಿಧಾನಸಭಾ ಕ್ಷೇತ್ರಗಳ ಕೆಲಸ ಕಾರ್ಯಗಳ ಹಾಗೂ ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿ ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 

ಇದು ಕಳೆದ 40 ವರ್ಷಗಳಿಂದ ನಡೆದುಕೊಂಡಿರುವ ಸಂಪ್ರದಾಯವಾಗಿದ್ದು, ಕೆಲ ವರ್ಷಗಳಿಂದ ಈ ಕಾರ್ಯಗಳು ನಡೆಯುತ್ತಿರಲಿಲ್ಲ. ಎಸ್ಎಂ ಕೃಷ್ಣ ಅವರ ಅವಧಿಯಲ್ಲಿ ಸಂಪುಟ ಸಚಿವರು ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಸ್ಥಳೀಯ ನಾಯಕರಿಗೆ ಮಾಹಿತಿ ನೀಡದೆಯೇ ಏಕಾಏಕಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ಮಾಹಿತಿ ನೀಡಿವೆ. 

ಇದೀಗ ಮುಖ್ಯಮಂತ್ರಿಗಳೂ ಕೂಡ ಇದೇ ಸಂಪ್ರದಾಯವನ್ನು ಮುಂದುವರೆಸಲು ಮುಂದಾಗಿದ್ದಾರೆ. ಸಾಕಷ್ಟು ವಿಧಾನಸಭಾ ಅಧಿವೇಶನಗಳು ಎಂಎಲ್ಎ/ಎಂಎಲ್ಸಿ ಕುಂದುಕೊರತೆಗಳ ಸಭೆಗಳಾಗಿ ಬದಲಾಗುತ್ತಿವೆ. ಪ್ರತೀಯೊಬ್ಬ ಶಾಸಕರು ಅಧಿವೇಶನದ ವೇಳೆ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸುತ್ತಾರೆ. ಹೀಗಾಗಿ ಈ ಸಣ್ಣ ಪುಟ್ಟ ವಿಚಾರಗಳನ್ನು ಆಗಾಗ ಸಚಿವರು ನಿವಾರಿಸಿದರೆ ಶಾಸಕರು ದೊಡ್ಡ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತಾರೆಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

SCROLL FOR NEXT