ರಾಜಕೀಯ

ಉಭಯ ಸದನಗಳಲ್ಲಿ ಯತ್ನಾಳ್ ವಿರುದ್ಧ ಆಕ್ರೋಶ, ಗದ್ದಲ, ಪ್ರತಿಭಟನೆ: ದಿನದ ಕಲಾಪ ಬಲಿ

Nagaraja AB

ಬೆಂಗಳೂರು: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ‌ ವಿರುದ್ಧ ಆಡಿದ ಮಾತಿನ ಕಿಡಿ, ಅದನ್ನು ಸಮರ್ಥಿಸಿಕೊಂಡ ಬಿಜೆಪಿ ಸಚಿವರ ಹೇಳಿಕೆಗಳು ಇಂದು ಉಭಯ ಸದನಗಳಲ್ಲಿ ಪ್ರತಿಧ್ವನಿಸಿ  ಇಡೀ ದಿನದ ಕಲಾಪವನ್ನು ನುಂಗಿಹಾಕಿತು.

ಬೆಳಿಗ್ಗೆಯಿಂದ ಸಂಜೆವರೆಗೆ ವಿಧಾನಸಭೆ ಗೊಂದಲದ ಗೂಡಾಗಿತ್ತು. ಆರೋಪ ಪ್ರತ್ಯಾರೋಪ ಸದನದಲ್ಲಿ ಪರಾಕಾಷ್ಠೆಯ ತುತ್ತತುದಿಗೆ ಮುಟ್ಟಿತ್ತು ಇಡೀ ದಿನದ  ಕಲಾಪ ಕೇವಲ ಘೋಷಣೆ, ಪ್ರತಿಭಟನೆ ಗದ್ದಲದ ನಡುವೆಯೇ ಆರಂಭವಾಗಿ ಗದ್ದಲದಲ್ಲೇ ಮುಕ್ತಾಯವಾಯಿತು.

ಗದ್ದಲದ ನಡುವೆ ಒಂದು ಹಂತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಯಾವುದೇ ಅಭ್ಯಂತರ ಇಲ್ಲ. ಪ್ರತಿಪಕ್ಷ ಮುಖಂಡರು ನೊಟೀಸ್ ನೀಡಿ ಚರ್ಚೆಗೆ ಸಿದ್ಧರಾಗಲಿ. ಸರ್ಕಾರ ಇದಕ್ಕೆ ತಕ್ಕ ಮತ್ತು ಸೂಕ್ತ ಉತ್ತರ ಕೊಡಲಿದೆ ಎಂದರು. ನೊಟೀಸ್ ಕೊಡದೆ ಕಾಲಹರಣ ಮಾಡುವುದು ವಿರೋಧಪಕ್ಷಕ್ಕೂ ಶೋಭೆ ತರುವುದಿಲ್ಲ. ಹಾಗೂ ಆಡಳಿತ ಪಕ್ಷಕ್ಕೂ ಶೋಭೆ ಬರುವುದಿಲ್ಲ. ಈ ವಿಷಯ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದರು. 

ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ದಿಕ್ಕಾರ, ದಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಲೇ ಇದ್ದರು, ಪರಿಣಾಮ ಕಲಾಪ ನಡೆಸಲು ಸಾಧ್ಯವಾಗದೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಗದ್ದಲದ ನಡುವೆಯೇ ವಿಧಾನಸಭೆಯ ಕಲಾಪವನ್ನು ನಾಳೆಗೆ ಮುಂದೂಡಿದರು.

ಮತ್ತೊಂದೆಡೆ ವಿಧಾನಪರಿಷತ್ತಿನಲ್ಲಿಯೂ ಈ  ವಿಚಾರ ಪ್ರತಿಧ್ವನಿಸಿ  ಇಡೀ ದಿನದ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು‌.ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಸದನದ ಬಾವಿಯಿಂದ ತಮ್ಮ ಆಸನಕ್ಕೆ ಬರಲು ಸದಸ್ಯರೆಲ್ಲ ನಿರಾಕರಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು. 

ಬಸನಗೌಡ ಪಾಟೀಲ್ ಯತ್ನಾಳ್ ಶಾಸಕ ಸ್ಥಾನ ರದ್ದುಗೊಳಿಸುವಂತೆ ಒತ್ತಾಯಿಸಿ ಬೆಳಗಿನಿಂದಲೂ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಇಂದು ದಿನದ ಕಲಾಪ ನಡೆಯಲು ಅವಕಾಶ ಮಾಡಿಕೊಡಲಿಲ್ಲ. ಗದ್ದಲದ ಗೂಡಾಗಿದ್ದ ಪರಿಷತ್ ಕಲಾಪವನ್ನು ಸಭಾಪತಿಗಳು ಮೂರು ಸಾರಿ ಮುಂದೂಡಿದರು.ಕೊನೆಗೂ ಪ್ರತಿಪಕ್ಷದ ಸದಸ್ಯರ ಮನವೊಲಿಸುವಲ್ಲಿ ಸಫಲವಾಗದ ಹಿನ್ನೆಲೆ ಕಲಾಪವನ್ನು ನಾಳೆಗೆ ಮುಂದೂಡಿದರು.

SCROLL FOR NEXT