ರಾಜಕೀಯ

ಖಾತೆ ಹಂಚಿಕೆ  ನಂತರ ಇದೀಗ ಜಿಲ್ಲಾ ಉಸ್ತುವಾರಿಗಾಗಿ ಲಾಬಿ, ಸಿಎಂ ಯಡಿಯೂರಪ್ಪಗೆ ನೂತನ ಸಚಿವರ ಮೊರೆ

Raghavendra Adiga

ಬೆಂಗಳೂರು: ಬಿ ಎಸ್ ಯಡಿಯೂರಪ್ಪ ಅವರ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವವರು ತಮ್ಮ ಸಚಿವಾಲಯಗಳ ಉಸ್ತುವಾರಿಯನ್ನು ಕೆಲವೇ ವಾರಗಳ ಹಿಂದೆ ವಹಿಸಿಕೊಂಡಿದ್ದಾರೆ, ಆದರೆ ಈಗಾಗಲೇ ಜಿಲ್ಲಾ ಉಸ್ತುವಾರಿ ಜವಾಬ್ದಾರಿಗಳಿಗಾಗಿ ತೀವ್ರವಾದ ಲಾಬಿ ಮಾಡಲು ಪ್ರಾರಂಭಿಸಿದ್ದಾರೆ. ಹೆಚ್ಚಾಗಿ ತವರು ಜಿಲ್ಲೆ ಅಥವಾ ಹೆಚ್ಚು ಆದಾಯ ಗಳಿಸಬಹುದಾದ ಜಿಲ್ಲೆಗಳಿಗೆ ಬಹು ಬೇಡಿಕೆ ಇದೆ.

ಸಿಎಂ ಯಡಿಯೂರಪ್ಪ ಸೇರಿದಂತೆ ಹಿಂದಿನ 18 ಮಂತ್ರಿಗಳಲ್ಲಿ 12 ಮಂದಿಗೆ ಒಂದಕ್ಕಿಂತ ಹೆಚ್ಚು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.  ಈಗ ಹೊಸದಾಗಿ ಸಚಿವರಾದವರು ತಮ್ಮ ಸ್ವಹಿತಾಸಕ್ತಿಗೆ ತಕ್ಕಂತೆ ಬೇಡಿಕೆ ಇಡುತ್ತಿದ್ದಾರೆ. ಬೆಂಗಳೂರು ನಗರ ಇದರಿಂದ ಹೊರಗುಳಿದಿರುವ ಕಾರಣ , ಬೆಂಗಳೂರಿನ ಅನೇಕ ಮಂತ್ರಿಗಳು ಪ್ರಸ್ತುತ ಕಂದಾಯ ಸಚಿವ ಆರ್ ಅಶೋಕ್ ಹೊಂದಿರುವ ಬೆಂಗಳೂರು ಗ್ರಾಮೀಣ ಜಿಲ್ಲೆಯ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ.

ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಜವಾಬ್ದಾರಿ ವಹಿಸಿಕೊಂಡಿರುವ ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳ ಉಸ್ತುವಾರಿಗಾಗಿ ಸಹ ಲಾಬಿ ಪ್ರಾರಂಭವಾಗಿದೆ. 

ಸಚಿವರಾದ ಡಾ. ಕೆ. ಸುಧಾಕರ್ ಹಾಗೂ ಎಸ್.ಟಿ. ಸೋಮಶೇಖರ್ ಮುಖ್ಯವಾಗಿ ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಗಿದು ತವರು ಜಿಲ್ಲೆ ಎಂಬುದು ಮುಖ್ಯ ಕಾರಣವಾಗಿದೆ.ಗೋಪಾಲಯ್ಯ ಹಾಗೂ ಭೈರತಿ ಬಸವರಾಜು ಅವರುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿಗಾಗಿ ಕಾಯುತ್ತಿದ್ದಾರೆ. ಇನ್ನು ಪ್ರಸ್ತುತ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಂದಿರುವ ಆರ್. ಅಶೋಕ್ ರಾಮನಗರ ಜಿಲ್ಲಾ ಉಸ್ತುವಾರಿಯನೂ ಹೊಂದಿದ್ದಾರೆ.

ಪ್ರಸ್ತುತ , ಕಲಬುರಗಿ, ಚಿಕ್ಕಬಳ್ಳಾಪುರ , ಕೊಪ್ಪಳ, ದಾವಣಗೆರೆ,  ಮಂಡ್ಯ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಮಡಿಕೇರಿ, ಹವೇರಿ, ಹಾಸನ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿಯು ಸಚಿವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. 

“ನಾನು ಹುಟ್ಟಿದ್ದು ಚನ್ನಪಟ್ಟಣದಲ್ಲಿ. ನಾನು ಅಲ್ಲಿಯೇ ಬೆಳೆದವನು.ನೆ, ಪಟ್ಟಣದ ಬೀದಿಗಳಲ್ಲಿ ಆಡುತ್ತಿದ್ದೆ. ನಾನು ಜಿಲ್ಲೆಗೆ ದೊಡ್ಡ ಅಭಿವೃದ್ಧಿ ಯೋಜನೆ ತರುವ ಕನಸು ಹೊಂದಿದ್ದೇನೆ. ಒಂದೊಮ್ಮೆ ಆ ಜಿಲ್ಲೆಯ ಜವಾಬ್ದಾರಿ ನನಗೆ ವಹಿಸಿದರೆ ತುಂಬಾ ಸಂತೋಷವಾಗುತ್ತದೆ. ಡಿಸಿಎಂ ಅಶ್ವಥ್ ನಾರಾಯಣ ಏನೆನ್ನುತ್ತಾರೆ ನೋಡಬೇಕಿದೆ"ಸಹಕಾರ ಸಚಿವ ಸೋಮಶೇಖರ್ ಹೇಳಿದರು. ಜಿಲ್ಲೆಯ ಉಸ್ತುವಾರಿ ಬೇಡಿಕೆಗಾಗಿ ಒತ್ತಾಯಿಸಲು ಅವರು ಭಾನುವಾರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿದರು.

SCROLL FOR NEXT