ರಾಜಕೀಯ

ಸದನದಲ್ಲಿ ಕೀಳುಮಟ್ಟದ ಪದ ಬಳಕೆ: ರಮೇಶ್ ಕುಮಾರ್ ಅಮಾನತಿಗೆ ಒತ್ತಾಯಿಸಿ ಬಿಜೆಪಿ ಸದಸ್ಯರಿಂದ ಗದ್ದಲ; ಕಲಾಪ ಮುಂದೂಡಿಕೆ

Vishwanath S

ಬೆಂಗಳೂರು: ಸಚಿವ ಡಾ.ಕೆ. ಸುಧಾಕರ್ ಮತ್ತು ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನಡುವೆ ನಿನ್ನೆ ನಡೆದ ಜಟಾಪತಿ ಹಾಗೂ ಮಾತಿನ ಚಕಮಕಿ ವಿಷಯ ಇಂದು ವಿಧಾನಸಭಾ ಅಧಿವೇಶನದಲ್ಲಿ ಪ್ರತಿಧ್ವನಿಸಿ ಗದ್ದಲ ಉಂಟಾದುದರಿಂದ ಸ್ಪೀಕರ್ ಆರಂಭದಲ್ಲೇ 15 ನಿಮಿಷ ಕಲಾಪ ಮುಂದೂಡಿದರು.

ಬೆಳಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಿದ್ದರಾಮಯ್ಯ ಅವರು ತಾವು ನಿನ್ನೆ ಸಲ್ಲಿಸಿರುವ ಹಕ್ಕುಚ್ಯುತಿ ನೋಟಿಸ್‌ ನಡಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆಗ ಆಡಳಿತ ಪಕ್ಷದವರು ಕೂಡ ಅಸಂವಿಧಾನಿಕ ಪದ ಬಳಸಿದ ರಮೇಶ್ ಕುಮಾರ್ ಅವರನ್ನು ಸದನದಿಂದ ಅಮಾನತು ಮಾಡಿ ಎಂದು ಒತ್ತಾಯಿಸಿ ಘೋಷಣೆ ಕೂಗಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಉಭಯ ಕಡೆಯವರಿಂದಲೂ ತಮಗೆ ಹಕ್ಕುಚ್ಯುತಿ ನೋಟಿಸ್ ತಲುಪಿದೆ. ತಾವು ನಿಯಮಾವಳಿ ಪ್ರಕಾರ ಪ್ರಶ್ನೋತ್ತರ ಅವಧಿ ಮುಗಿದ ನಂತರ ಮಾತನಾಡಲು ಇಬ್ಬರಿಗೂ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಬಿಜೆಪಿ ಸದಸ್ಯರು ತಮ್ಮ ಪಟ್ಟು ಮುಂದುವರಿಸಿ, ಈ ಸದನದಿಂದ ರಮೇಶ್ ಕುಮಾರ್ ಅವರನ್ನು ಅಮಾನತು ಮಾಡಬೇಕು ಎಂದು ಪುನರುಚ್ಚರಿಸಿದರು.

ರೇಣುಕಾಚಾರ್ಯ ಸೇರಿದಂತೆ ಇತರ ಬಿಜೆಪಿ ಸದಸ್ಯರು, ರಮೇಶ್ ಕುಮಾರ್ ಎಲ್ಲಿ, ಪಲಾಯನವಾದಿ ಮುಂತಾದ ಘೋಷಣೆಗಳನ್ನು ಕೂಗಿದರು.
ಸಿದ್ದರಾಮಯ್ಯ ಮಾತನಾಡಿ, ತಾವು ನಿನ್ನೆಯೇ ಹಕ್ಕುಚ್ಯುತಿ ನೋಟಿಸ್ ನೀಡಿದ್ದೇನೆ, ಮೊದಲು ತಮಗೆ ಮಾತನಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಪ್ರಶ್ನೋತ್ತರ ಅವಧಿ ಮುಗಿದ ನಂತರ ಅವಕಾಶ ನೀಡುತ್ತೇನೆ ಎಂದು ಸ್ಪೀಕರ್ ಹೇಳಿದಾಗ, ಅದಕ್ಕೆ ಒಪ್ಪಿ ಕುಳಿತುಕೊಂಡರು.

ಆದರೆ ಆಡಳಿತ ಪಕ್ಷದ ಸದಸ್ಯರು ಗದ್ದಲ ಮುಂದುವರಿಸಿದಾಗ, ಇಂತಹ ವಾತಾವರಣದಲ್ಲಿ ಪ್ರಶ್ನೋತ್ತರ ಕಲಾಪ ಅಥವಾ ಹಕ್ಕುಚ್ಯುತಿ ವಿಷಯ ಚರ್ಚಿಸಲು ಸಾಧ್ಯವಿಲ್ಲ ಎಂದು ಹೇಳಿ ಕಲಾಪವನ್ನು ಸ್ಪೀಕರ್ 15 ನಿಮಿಷಗಳ ಕಾಲ ಮುಂದೂಡಿದರು.

SCROLL FOR NEXT