ರಾಜಕೀಯ

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಪತ್ರ ಸಂದೇಶಕ್ಕೆ ಮೊರೆ ಹೋದ ದಿಗ್ವಿಜಯ್ ಸಿಂಗ್

Shilpa D

ಬೆಂಗಳೂರು:  ಬೆಂಗಳೂರಿನ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಿಗೆ ಕೊರಿಯರ್ ಮೂಲಕ ಪತ್ರವನ್ನು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ರವಾನಿಸಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಭೇಟಿಗೆ ಪೊಲೀಸರು ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಕೊರಿಯರ್ ಸರ್ವಿಸ್‌ ಮೂಲಕ ಪತ್ರವನ್ನು ರವಾನೆ ಮಾಡುತ್ತಿದ್ದೇನೆ ಎಂದರು.

ಆಪರೇಷನ್‌ ಕಮಲಕ್ಕೆ ಒಳಗಾಗಿ ಮಧ್ಯಪ್ರದೇಶದ 18 ಶಾಸಕರು ಬೆಂಗಳೂರಿನ ರಮಡಾ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ಶಾಸಕರನ್ನು ಬಿಜೆಪಿ ಅಕ್ರಮ ಬಂಧನದಲ್ಲಿ ಇಟ್ಟಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ರೆಸಾರ್ಟ್‌ನಲ್ಲಿರುವ ಶಾಸಕರನ್ನು ಭೇಟಿಯಾಗಲು ದಿಗ್ವಿಜಯ್ ಸಿಂಗ್ ಪ್ರಯತ್ನಿಸಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ.

ಪೊಲೀಸರ ಕ್ರಮವನ್ನು ಖಂಡಿಸಿ ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ದಿಗ್ವಿಜಯ್ ಸಿಂಗ್ ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿತ್ತು. ಪೊಲೀಸರ ನಡೆಯನ್ನು ಪ್ರಶ್ನಿಸಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ದಿಗ್ವಿಜಯ್ ಸಿಂಗ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು.

ಇದೀಗ ಮತ್ತೊಮ್ಮೆ ಡಿಜಿಪಿಯವನ್ನು ಭೇಟಿಯಾಗಿ ರೆಸಾರ್ಟ್‌ನಲ್ಲಿರುವ ಶಾಸಕರಿಗೆ ಪತ್ರವನ್ನು ನೀಡುವಂತೆ ಕೋರಿದ್ದಾರೆ. ಆದರೆ ಇದಕ್ಕೆ ಸ್ಪಂದನೆ ಸಿಗದೇ ಇರುವುದರಿಂದ ಕೊರಿಯರ್ ಮೂಲಕ ಪತ್ರವನ್ನು ರೆಸಾರ್ಟ್‌ಗೆ ರವಾನೆ ಮಾಡಿದ್ದಾರೆ.

ರಾಜ್ಯ ಪೊಲೀಸರು ಸಿಎಂ ಬಿ.ಎಸ್‌ ಯಡಿಯೂರಪ್ಪನವರ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.  ಸಿಎಂ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಅವಕಾಶ ನಿರಾಕರಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಆಪರೇಷನ್ ಕಮಲದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರ ಕೈವಾಡ ಇದೆ ಎಂದು ಆರೋಪಿಸಿದ ದಿಗ್ವಿಜಯ್ ಸಿಂಗ್ ಹಣದ ಅಮಿಷವನ್ನು ಒಡ್ಡಿ ಬಿಜೆಪಿ ಶಾಸಕರ ಖರೀದಿಗೆ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. 

SCROLL FOR NEXT