ಪ್ರತಿಪಕ್ಷ ನಾಯಕರಿಂದ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಕೆ 
ರಾಜಕೀಯ

ಸಿದ್ದರಾಮಯ್ಯ ನೇತೃತ್ವದಲ್ಲಿ ವಿಪಕ್ಷಗಳಿಂದ ಮುಖ್ಯಮಂತ್ರಿ ಭೇಟಿ: ಹಕ್ಕೊತ್ತಾಯ ಮಂಡನೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ವಿರೋಧ ಪಕ್ಷಗಳು, ರೈತ ಸಂಘಟನೆಗಳ ಮುಖಂಡರ ನಿಯೋಗದಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ವೇಳೆ ಮುಖಂಡರ ನಿಯೋಗ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯಗಳನ್ನು ಮಂಡಿಸಿತು

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ವಿರೋಧ ಪಕ್ಷಗಳು, ರೈತ ಸಂಘಟನೆಗಳ ಮುಖಂಡರ ನಿಯೋಗದಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ವೇಳೆ ಮುಖಂಡರ ನಿಯೋಗ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯಗಳನ್ನು ಮಂಡಿಸಿತು

ಕೊರೋನಾ ರೋಗ ನಿವಾರಣೆ ಹಾಗೂ ಲಾಕ್‍ಡೌನ್‍ನಿಂದಾಗಿ ಉಂಟಾಗಿರುವ ಜನರ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಕನಿಷ್ಠ ರೂ.50,000 ಕೋಟಿಗಳ ವಿಶೇಷ ಆರ್ಥಿಕ ಪ್ಯಾಕೇಜನ್ನು ನೀಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕು. ರಾಜ್ಯವ್ಯಾಪಿ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿ ಹಾಗೂ ಬೆಳೆಗಳ ಕಟಾವಿಗೆ ಅವಕಾಶ ಕಲ್ಪಿಸುವುದು ಮತ್ತು ಮಾರಾಟ ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಮಾರುಕಟ್ಟೆ ಒದಗಿಸಬೇಕು ಎಂದು ಹಕ್ಕೊತ್ತಾಯದಲ್ಲಿ ಆಗ್ರಹಿಸಲಾಗಿದೆ

ರೈತರು ಬೆಳೆದಿರುವ ಪದಾರ್ಥಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದೆ ಇದ್ದ ಸಂದರ್ಭದಲ್ಲಿ ಸರ್ಕಾರವೇ ರೈತರ ಹೊಲದಿಂದ ನೇರವಾಗಿ ಬೆಳೆದ ಪದಾರ್ಥಗಳನ್ನು ಖರೀದಿಸಿ, ರೈತರಿಗೆ ಸಹಾಯ ಮಾಡಬೇಕು. ಲಾಕ್‍ಡೌನ್ ಅವಧಿಯಲಿ ನಷ್ಟ ಅನುಭವಿಸಿರುವ ರೈತರಿಗೆ ನಷ್ಟ ಪರಿಹಾರ ನೀಡುವುದು ಹಾಗೆಯೆ ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೆ ನಷ್ಟ ಅನುಭವಿಸಿರುವ ರೈತರಿಗೂ ಸಹ ಸೂಕ್ತ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ

ರೈತರು ಬೆಳೆದ ಬೆಳೆ, ತರಕಾರಿ, ಹಣ್ಣು, ಹೂವು, ಪೌಲ್ಟ್ರಿ, ರೇಷ್ಮೆ ಮುಂತಾದ ಉತ್ಪನ್ನಗಳನ್ನು ಬೆಳೆದು ರೈತರು ನಷ್ಟದ ಕುರಿತು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿ, ನ್ಯಾಯೋಚಿತವಾಗಿ ಕನಿಷ್ಟ ಶೇ.50ರಷ್ಟು ಪರಿಹಾರವನ್ನು ಸಮರೋಪಾದಿಯಲ್ಲಿ ನೀಡಬೇಕು. ರೈತರು ಬೆಳೆದ ಪ್ರತಿ ಪದಾರ್ಥಗಳಿಗೂ ಉತ್ಪಾದನಾ ವೆಚ್ಚವನ್ನು ಆಧರಿಸಿ, ನಿಗದಿತ ಬೆಲೆಯನ್ನು ತುರ್ತಾಗಿ ನಿಗದಿ ಮಾಡಬೇಕು. ನಿಗದಿ ಮಾಡಿದ ದರಗಳಿಗಿಂತ ಬೆಲೆ ಕಡಿಮೆಯಾದರೆ ಸರ್ಕಾರವು ಮಧ್ಯ ಪ್ರವೇಶ ಮಾಡಿ ಪ್ರೋತ್ಸಾಹ ಧನ/ಬೆಂಬಲ ಬೆಲೆ ನೀಡಲು 5000 ಕೋಟಿ ರೂಗಳ ಆವರ್ತ ನಿಧಿಯನ್ನು ಸ್ಥಾಪಿಸಿ, ಆ ನಿಧಿಯನ್ನು ಬಳಸಿ ಎ.ಪಿ.ಎಂ.ಸಿ.ಗಳ ಮೂಲಕ ರೈತರ ಉತ್ಪನ್ನಗಳನ್ನು ಖರೀದಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಲಾಗಿದೆ

ಸರ್ಕಾರ ಈ ಕೂಡಲೇ ಬರಪೀಡಿತ ತಾಲ್ಲೂಕುಗಳಿಗೆ ನೀಡಬೇಕಾದ ಸವಲತ್ತುಗಳನ್ನು ನೀಡುವುದು. ಬರಗಾಲದಿಂದ ನಷ್ಟವಾಗಿರುವ ಬೆಳೆಗಳಿಗೂ ಸರ್ಕಾರ ಪರಿಹಾರ ನೀಡಬೇಕು. ಪೂರ್ವ ಮುಂಗಾರಿನ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಭತ್ತ, ಬಾಳೆ, ದ್ರಾಕ್ಷಿ, ಮಾವು, ಟೊಮೆಟೊ ಮುಂತಾದ ಬೇಸಿಗೆಯ ಬೆಳೆಗಳು ತೀವ್ರ ರೀತಿಯ ಹಾನಿಗೆ ಒಳಗಾಗಿವೆ. ಹಾನಿಗೊಳಗಾದ ಪ್ರದೇಶ ಎಷ್ಟು ಎಂಬುದರ ಕುರಿತು ಸಮರ್ಪಕವಾಗಿ ಜಂಟಿ ಸರ್ವೆ ನಡೆಸುವುದು ಮತ್ತು ಪ್ರತಿ ಹೆಕ್ಟೆರ್‍ಗೆ ನೀಡುತ್ತಿರುವ ಪರಿಹಾರ ಮೊತ್ತವಾದ ರೂ.13,500 ಗಳನ್ನು ಈ ಹಿಂದೆ ನೀಡಿದಂತೆ ರೂ.25,000 ಗಳಿಗೆ ಹೆಚ್ಚಿಸಬೇಕು. ರಾಜ್ಯದಲ್ಲಿ ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಹಣ ಸುಮಾರು ರೂ.3,000 ಕೋಟಿ ತುರ್ತಾಗಿ ಪಾವತಿಸುವಂತೆ ಆದೇಶ ಮಾಡಬೇಕು ಎಂದು ಆಗ್ರಹಿಸಲಾಗಿದೆ

ತೊಗರಿ ಬೆಳೆಗಾರರಿಗೆ ಬಾಕಿ ಹಣವನ್ನು ರೈತರಿಗೆ ಬಿಡುಗಡೆ ಮಾಡಬೇಕು. ಎಲ್ಲ ಸಹಕಾರಿ/ವಾಣಿಜ್ಯ ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕನಿಷ್ಟ ರೂ.10,000 ಕೋಟಿಗಳನ್ನು ಬಿಡುಗಡೆ ಮಾಡಿ, ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕು. ರೈತರಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ, ಅಗತ್ಯ ಔಷಧಿ ಹಾಗೂ ಇತರೇ ಸಲಕರಣೆಗಳನ್ನು ರೈತರಿಗೆ ಉಚಿತವಾಗಿ ನೀಡಲು ಕ್ರಮ ಜರುಗಿಸಬೇಕು. ವಿವಿಧ ಬ್ಯಾಂಕುಗಳಲ್ಲಿ ರೈತರಿಗೆ ನೀಡಿರುವ ಸಾಲ ವಸೂಲಾತಿ ಕೊರೋನ ಅವಧಿ ಮುಗಿಯುವವರೆಗೂ ಷರತ್ತು ರಹಿತವಾಗಿ ಮುಂದೂಡಲು ಹಾಗೂ ಈ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಲಾಕ್‍ಡೌನ್ ಕಾರಣದಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನಿರ್ವಹಿಸಲು ಸಾಧ್ಯವಾಗದ ಅವಧಿಗೆ ನೋಂದಾಯಿತ ಕಾರ್ಮಿಕರಿಗೆ ನಿಗದಿತ ವೇತನವನ್ನು ಕಡ್ಡಾಯವಾಗಿ ನೀಡಲು ಕ್ರಮವಹಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಗಿದೆ

ಸಾಂಪ್ರದಾಯಿಕ ವೃತ್ತಿ ನಡೆಸುವವರು, ಸಿನಿಮಾ, ಟಿ.ವಿ., ಧಾರವಾಹಿಗಳಲ್ಲಿ ಕೆಲಸ ಮಾಡುವ ಕಲಾವಿದರು, ಕಾರ್ಮಿಕರು ಮತ್ತು ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರು. ಮತ್ತು ಬೀದಿ ಬದಿಯ ವ್ಯಾಪಾರಿಗಳು, ಅಲೆಮಾರಿ ಸಮುದಾಯಗಳು, ಮಂಗಳಮುಖಿಯರು, ದೇವದಾಸಿಯರು, ಅಂಗವಿಕಲರು, ಪ್ಲಾಂಟೇಶನ್ ಕಾರ್ಮಿಕರು, ಟಾಂಗಾ ಚಾಲಕರು, ದರ್ಜಿಗಳ, ಪೋಟೋಗ್ರಾಫರ್ ಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್ ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಮತ್ತು ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆ ಕೆಲಸದವರು, ನರೇಗಾ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಮುಂತಾದ ಎಲ್ಲಾ ರೀತಿಯ ಕಾರ್ಮಿಕರಿಗೆ ಕೊರೋನಾ ಮುಗಿಯುವವರೆಗೆ ಪ್ರತಿ ತಿಂಗಳು ಹತ್ತು ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಲಾಗಿದೆ. 

 ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರಿಗೂ ಪ್ರತಿ ತಿಂಗಳು ಹತ್ತು ಸಾವಿರ ರೂ. ನೀಡುವುದು. ಜಾನುವಾರುಗಳಿಗೆ ಉಚಿತವಾಗಿ ಹಿಂಡಿ, ಬೂಸಾ, ಮೇವು ಮತ್ತು ಪಶು ಆಹಾರಗಳನ್ನು ಉಚಿತವಾಗಿ ನೀಡಲು ಸರ್ಕಾರ ವಿಶೇಷ ಪ್ಯಾಕೇಜ್‍ನ್ನು ರೂಪಿಸಬೇಕು. ವಿವಿಧ ಕಾರಣಗಳಿಂದ ಮರಣ ಹೊಂದುವ ಕುರಿ, ಮೇಕೆ, ಹಸು, ಎತ್ತು, ಎಮ್ಮೆ ಮುಂತಾದವುಗಳಿಗೆ ರೂ.5,000 ದಿಂದ ರೂ.10,000 ಗಳವರೆಗೆ ಅನುಗ್ರಹ ಯೋಜನೆಯಡಿ ಪರಿಹಾರ ನೀಡಲಾಗುತ್ತಿತ್ತು.ಇದನ್ನು ಸರ್ಕಾರ ಇತ್ತೀಚಿಗೆ ನಿಲ್ಲಿಸಿದೆ. ರೈತರ ಹಿತದೃಷ್ಟಿಯಿಂದ ಸದರಿ ಯೋಜನೆಯನ್ನು ಮುಂದುವರೆಸಿ ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ನೀಡಲು ಕ್ರಮವಹಿಸುವುದು. ನೇಕಾರರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ನಲ್ಲಿ ಕಂಬಳಿ ನೇಕಾರರ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ

ಸಂಕಷ್ಟದಲ್ಲಿರುವ ಸೂಕ್ಷ್ಮ, ಅತಿಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ರೂ.10 ಸಾವಿರ ಕೋಟಿಗಳ ವಿಶೇಷ ಪ್ಯಾಕೇಜನ್ನು ನೀಡಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಬೇಕಾದ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕು. ಶೇ.4ರ ಬಡ್ಡಿದರದಲ್ಲಿ ಸಾಲ ನೀಡುವುದು, ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗದಂತೆ ನೋಡಿಕೊಳ್ಳುವುದು, ವಿದ್ಯುಚ್ಛಕ್ತಿಯ ದರಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ರಫ್ತುಗಳಿಗೆ ಉತ್ತೇಜನ ನೀಡುವುದು ಹಾಗೂ ಈ ಸಂಕಷ್ಟದ ಅವಧಿಯ ಇ.ಎಂ.ಐ., ಗಳಿಗೆ ವಿಧಿಸುವ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲು ಸರ್ಕಾರ ಕ್ರಮವಹಿಸಬೇಕು. ನಮ್ಮ ರಾಜ್ಯದಿಂದ ಪಿ.ಎಂ.ಕೇರ್ಸ್ ನಿಧಿಗೆ ಹೋಗಿರುವ ಎಲ್ಲಾ ಹಣವನ್ನು ಮರಳಿ ರಾಜ್ಯಕ್ಕೆ ನೀಡುವಂತೆ ಒತ್ತಾಯಿಸಬೇಕು. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಬಂದಿದೆ? ಇದನ್ನು ಯಾವ, ಯಾವ ಬಾಬತ್ತಿಗಾಗಿ ಖರ್ಚು ಮಾಡಲಾಗಿದೆ? ಉಳಿಕೆ ಎಷ್ಟು ಹಣ ಲಭ್ಯವಿದೆ? ಎಂಬ ಮಾಹಿತಿಯನ್ನು ‘ಶ್ವೇತ ಪತ್ರ’ ಹೊರಡಿಸಬೇಕು ಎಂದು ಆಗ್ರಹಿಸಲಾಗಿದೆ

ಆಹಾರ ಪದಾರ್ಥಗಳ ಕಿಟ್ ವಿತರಣೆಯಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು. ಕೊರೋನಾ ರೋಗದ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಪರಿಸ್ಥಿತಿಯನ್ನು ಎದುರಿಸಲು ತೆಲಂಗಾಣ ಮತ್ತು ಕೇರಳ ಸರ್ಕಾರಗಳು ಅನುಕ್ರಮವಾಗಿ ಸರ್ಕಾರಗಳು ರೂ.35 ಸಾವಿರ ಕೋಟಿಗಳು ಮತ್ತು ರೂ.20 ಸಾವಿರ ಕೋಟಿಗಳ ವಿಶೇಷ ಪ್ಯಾಕೇಜನ್ನು ರೂಪಿಸಬೇಕು ಎಂದು ಹಕ್ಕೊತ್ತಾಯದಲ್ಲಿ ಆಗ್ರಹಿಸಲಾಗಿದೆ

ಮುಖ್ಯಮಂತ್ರಿಗಳ ಭೇಟಿಯ ಬಳಿಕ ಸಿದ್ದರಾಮಯ್ಯ ಮಾತನಾಡಿ, ವಿವಿಧ ವರ್ಗಗಳ ಅನೇಕ ಜನರು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ. ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಣೆಗೆ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಕೊರೊನಾ ಸೋಂಕು ರಾಜ್ಯದಲ್ಲಿ ಉಲ್ಬಣ ಆಗುತ್ತಿರಲಿಲ್ಲ. ವಿಮಾನಗಳ ಹಾರಾಟ ಮೊದಲೇ ನಿಲ್ಲಿಸಿ ವಲಸೆ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕಿತ್ತು. ಕೊರೋನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಹೇಳಿದರು. 

ಪಿಎಂ ಕೇರ್ ನಲ್ಲಿ 35 ಸಾವಿರ ಕೋಟಿ ಇದೆ. ಅದರಲ್ಲಿ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ರಾಜ್ಯದಿಂದ ಹೋಗಿರುವ ಹಣವನ್ನಾದರೂ ನಮಗೆ ಕೇಂದ್ರ ಕೊಡಬೇಕಿತ್ತು. ಜನರ ಬಳಿ ಹಣವಿಲ್ಲ ಎಂದರೆ ಖರೀದಿ ಮಾಡುವ ಶಕ್ತಿ ಇರುವುದಿಲ್ಲ. ಖರೀದಿ ಇಲ್ಲ ಎಂದಾದರೆ ಮಾರುಕಟ್ಟೆಯಲ್ಲಿ ಯಾವುದಕ್ಕೂ ಬೇಡಿಕೆ ಇರದು. ಖರೀದಿ ಶಕ್ತಿ ಜನರಿಗೆ ಬಂದರೆ ಆರ್ಥಿಕ ಚಟುವಟಿಕೆಗಳು ಬೆಳೆಯುತ್ತವೆ ಎಂದು ತಜ್ಞರು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವನ್ನು ನೆರವಿಗೆ ಒತ್ತಾಯಿಸಬೇಕು ಎಂದರು

ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿರುವ ಪ್ಯಾಕೇಜ್ ಸ್ವಾಗತಾರ್ಹ. ಆದರೆ, ಹಲವಾರು ಮಂದಿಯನ್ನು ಪ್ಯಾಕೇಜ್ ನಿಂದ ಹೊರಗೆ ಇಡಲಾಗಿದೆ. ಕಾರ್ಮಿಕರಿಗೆ ಒಂದು ಬಾರಿಗೆ ಐದು ಸಾವಿರ ಕೊಡುವ ಬದಲು ಕೊರೊನಾ ಮುಗಿಯುವವರೆಗೆ ಪ್ರತಿ ತಿಂಗಳು ಎರಡು ಸಾವಿರ ಕೊಡಬೇಕು. ವಿವಿಧ ಸಂಸ್ಥೆಗಳಲ್ಲಿ‌ ಸರ್ಕಾರದ ಹಣ ಇದೆ. ಆದಾಯ ಎಂದು ಹೇಳಿ ಕೇಂದ್ರ ಅದನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇರುವ ಹಣವನ್ನು ಸಂತ್ರಸ್ತರಿಗಾಗಿ ಖರ್ಚು ಮಾಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT