ರಾಜಕೀಯ

ಪ್ಯಾಕೇಜ್ ಘೋಷಣೆ ಸಂತಸದ ವಿಚಾರ; ಹಿಂದೆ ಘೋಷಿಸಿದ್ದ ಪ್ಯಾಕೇಜ್ ಏನಾಯಿತು?: ಡಿಕೆಶಿ

Lingaraj Badiger

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 20‌ ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿರುವುದು ಸಂತಸದ ವಿಚಾರವಾದರೂ ಹಿಂದೆ ಘೋಷಿಸಿದ್ದ 1610 ಕೋಟಿ ಪ್ಯಾಕೇಜ್ ಏನಾಯಿತು? ಇದು ಒಬ್ಬರಿಗಾದರೂ ತಲುಪಿದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಇದುವರೆಗೂ ಕೇಂದ್ರದಿಂದಾಗಲೀ ಯಡಿಯೂರಪ್ಪರಿಂದ ಘೋಷಿಸಿದ ಪರಿಹಾರವಾಗಲೀ ಯಾರಿಗೂ ತಲುಪಿದ್ದನ್ನು ನೋಡಿಲ್ಲ. ಮೋದಿ ಹಾಗೂ ಯಡಿಯೂರಪ್ಪ ಮಾತುಕೊಟ್ಟಂತೆ ಉಳಿಸಿಕೊಳ್ಳಲಿ, ನಡೆಯಲಿ ಎಂದು ಎರಡೂ ಸರ್ಕಾರವನ್ನು ಶಿವಕುಮಾರ್ ತಿವಿದರು.

ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಹಾಗೂ ದೇಶವನ್ನು ನಡೆಸುವುದನ್ನು ಮೊದಲು ಈ ಎರಡು ಸರ್ಕಾರಗಳು ಬಿಡಬೇಕು. ಯೋಜನೆಗಳನ್ನು ಜನರಿಗೆ ನೀಡಿದ ಭರವಸೆಯನ್ನು ಕಾರ್ಯಗತಗೊಳಿಸಬೇಕು. ಕೊರೋನಾದಿಂದ ಜನರಿಗಾದ ನಷ್ಟ ಭರಿಸಿ ಅವರಿಗೆ ಬದುಕು ಕಟ್ಟಿಕೊಡಬೇಕೆಂದು ಸಲಹೆ ನೀಡಿದರು.

ರೈಲ್ವೆಯಲ್ಲಿ ಪ್ರಯಾಣಿಸಿದ ಕನ್ನಡಿಗರ ಪ್ರಯಾಣ ವೆಚ್ಚವನ್ನು ಭರಿಸಲು ಯಡಿಯೂರಪ್ಪಗೇನಾಗಿತ್ತು? ಹೊರ ರಾಜ್ಯಗಳಲ್ಲಿ ರಾಜ್ಯದ ಕನ್ನಡಿಗರು ಕಾರ್ಮಿಕರು ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾರೆ. ಇಲ್ಲಿಂದ ಬೇರೆ ಕಡೆ ಕಾರ್ಮಿಕರನ್ನು ಕಳುಹಿಸಲಾಗಲೀ ಅಥವಾ ಅಲ್ಲಿಂದ ಕಾರ್ಮಿಕರನ್ನು ರಾಜ್ಯಕ್ಕೆ ಕರೆಸುವುದಕ್ಕಾಗಲಿ ಸರ್ಕಾರ ಇನ್ನೂ ಸರಿಯಾದ ವ್ಯವಸ್ಥೆ ಮಾಡಿಲ್ಲ. ಈ ಸರ್ಕಾರಗಳಿಂದ ಜನರಿಗೆ ಒಳ್ಳೆಯದಾಗಿರುವುದನ್ನು ತಾವು ಕಂಡಿಲ್ಲ‌ ಎಂದು ಟೀಕಿಸಿದರು.

SCROLL FOR NEXT