ರಾಜಕೀಯ

ಪ್ರತೀಯೊಬ್ಬ ವಲಸಿಗನನ್ನು ತಲುಪುವುದೇ ನಮ್ಮ ಪ್ರಮುಖ ಆದ್ಯತೆ: ಡಿ.ಕೆ.ಶಿವಕುಮಾರ್

Manjula VN

ಬೆಂಗಳೂರು: ರಾಜ್ಯದಲ್ಲಿರುವ ಪ್ರತೀಯೊಬ್ಬ ವಲಸಿಗನನ್ನು ತಲುಪುವುದೇ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿರುವ ಅವರು, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಯನ್ನು ಪಕ್ಷವೇಕೆ ವಿರೋಧಿಸುತ್ತಿದೆ ಎಂಬುದರ ಬಗ್ಗೆ ಹಾಗೂ ವಲಸೆ ಕಾರ್ಮಿಕರ ಕುರಿತಂತೆ ಪಕ್ಷದ ಬದ್ಧತೆ ಕುರಿತು ವಿವರಿಸಿದ್ದಾರೆ. 

ನಮ್ಮ ಜನರು ಹೂಡಿಕೆಗಾಗಿ ವಿದೇಶಿ ಕಂಪನಿಗಳ ಗುಲಾಮರಾಗಲು ಸಾಧ್ಯವಿಲ್ಲ. ಹೆಚ್ಚಿನ ವಿದೇಶಿ ಕಂಪನಿಗಳನ್ನು ಆಕರ್ಷಿಸುವ ಸಲುವಾಗಿ ನಮ್ಮ ಹಕ್ಕುಗಳಲ್ಲಿ ರಾಜಿ ಮಾಡಿಕೊಳ್ಳುವುದು ತಪ್ಪು ಎಂದು ಹೇಳಿದ್ದಾರೆ. 

ವಲಸೆ ಕಾರ್ಮಿಕರ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ನಾವು ವಲಸೆ ಕಾರ್ಮಿಕರ ಸಾರಿಗೆ ವೆಚ್ಚವನ್ನು ಭರಿಸುವ ನಿರ್ಧಾರ ಕೈಗೊಂಡೆವು. ವಲಸೆ ಕಾರ್ಮಿಕರು ದೇಶ ಕಟ್ಟುವ ಜನರಾಗಿದ್ದಾರೆ. ತಮ್ಮ ತಮ್ಮ ತವರಿಗೆ ಮರಳುತ್ತಿರುವವರು ಬಡವರಾಗಿರಬಹುದು. ಆದರೆ, ತಮ್ಮ ಕುಟುಂಬಗಳಿಗೆ ಆಹಾರ ಒದಗಿಸುವವರಾಗಿದ್ದಾರೆ. ಅಭಿಪ್ರಾಯ ವ್ಯಕ್ತಪಡಿಸುವವರಾಗಿದ್ದಾರೆ. ಇಂತಹವರನ್ನು ಕೆಟ್ಟದಾಗಿ ನಡೆಸಿಕೊಳ್ಳಬಾರದು. ಈ ಕಾರಣಕ್ಕೇ ನಾವು ಪ್ರತೀಯೊಬ್ಬ ವಲಸೆ ಕಾರ್ಮಿಕನನ್ನು ತಲುಪಲು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ. 

ಇದೇ ವೇಳೆ ಪಕ್ಷದಲ್ಲಿ ಕೆಲ ನ್ಯೂನತೆಗಳಿರುವುದನ್ನು ಸ್ವತಃ ಡಿಕೆ.ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದು, ಸುಧಾರಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಕೇಡರ್ ಆಧಾರಿತ ಪಕ್ಷವಾಗಿದ್ದು, ತೆಗೆದುಕೊಳ್ಳುವ ನಿರ್ಧಾರ ಕೆಳಮಟ್ಟದಿಂದ ಮೇಲಿನ ಸ್ಥರಕ್ಕೆ ಹೋಗಬೇಕು. ಅದನ್ನು ಬಿಟ್ಟರೆ ಬೇರಾವುದೇ ರೀತಿಯಲ್ಲಿರಬಾರದು. ಪಕ್ಷದಲ್ಲಿರುವ ಕೆಲ ನ್ಯೂನತೆಗಳಿಂದಾಗಿ ಅನೇಕ ಶಾಸಕರು ಇತರೆ ಪಕ್ಷಗಳಿಗೆ ಪಕ್ಷಾಂತರಗೊಳ್ಳುತ್ತಿದ್ದಾರೆ. 

ರಾಜಕೀಯ ಮಹತ್ವಾಕಾಂಕ್ಷೆಯಿಂದ ದೂರ ಸರಿಯುವುದಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಾನು ಈ ಸ್ಥಾನದಲ್ಲಿದ್ದೇನೆ. ಕೇವಲ ಚುನಾವಣೆ ಗೆಲ್ಲುವುದಷ್ಟೇ ಅಲ್ಲ. ನನ್ನೊಂದಿಗೆ 113 ಮಂದಿ ಕೂಡ ಗೆಲವು ಸಾಧಿಸಬೇಕು. ನಾನೊಬ್ಬ ಪ್ರಾಕ್ಟಿಕಲ್ ರಾಜಕಾರಣಿಯಾಗಿದ್ದು, ನನ್ನಲ್ಲೂ ಕೆಲ ಮಹತ್ವಕಾಂಕ್ಷೆಗಳಿವೆ. ಆದರೆ, ಸಾಮೂಹಿಕ ಪ್ರಯತ್ನಗಳ ಅಗತ್ಯವೂ ಇದೆ ಎಂದು ಹೇಳಿದ್ದಾರೆ. 

ಇದೇವೇಲೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ನಡೆಯುತ್ತಿಲುವ ಕೋಲ್ಡ್ ವಾರ್ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

ಹಿಂದಿ ಕಲಿಯಲು ನನ್ನ ಬಳಿ ಸಮಯವಿರಲಿಲ್ಲ. ತಿಹಾರ್ ಜೈಲಿನಲ್ಲಿದ್ದಾಗ ಹಿಂದಿ ಶಿಕ್ಷಕರೊಬ್ಬರು ಪರಿಚಯವಾಗಿದ್ದರು. ಈ ವೇಳೆ ಅವರಿಂದ ಅಲ್ಪಸ್ವಲ್ಪ ಹಿಂದಿ ಕಲಿತೆ. ಮೇ.31 ರಂದು ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೊರೋನಾದಿಂದಾಗಿ ಅದು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ 6000 ಪಂಚಾಯತಿಗಳಿದ್ದು, ಪ್ರತೀ ಪಂಚಾಯತ್ ಮಟ್ಟದಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತದೆ. ನಾನು ಪ್ರಮಾಣವಚನ ಸ್ವೀಕಾರ ಮಾಡುವಾಗ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಪ್ರಮಾಣ ಮಾಡಬೇಕು ಎಂದಿದ್ದಾರೆ. 

SCROLL FOR NEXT