ರಾಜಕೀಯ

ಸಿದ್ದರಾಮಯ್ಯ ಅವಾಜ್‌ಗೆ ಅವಕ್ಕಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್!

Lingaraj Badiger

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಕಿದ ಅವಾಜ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವಕ್ಕಾದ ಘಟನೆ ಬುಧವಾರ ಜರುಗಿತು.

ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ಹಲವು ತೀರ್ಮಾನಗಳನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸೌಧ ಹಾಗೂ ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್‌ ನಾಯಕರಿಗೆ ಆಶ್ಚರ್ಯ ಕಾದಿತ್ತು. 

ಭದ್ರತಾ ದೃಷ್ಟಿಯಿಂದ ಯಾವುದೇ ಪ್ರತಿಭಟನೆಯನ್ನು ಮಾಡಲು ಅನುಮತಿಯನ್ನು ನೀಡಿಲ್ಲ ಎಂದು ವಿಧಾನಸೌಧ ಪೊಲೀಸರು ಸೂಚನಾ ಪತ್ರ ಅಂಟಿಸಿದ್ದರು. ಇದರಿಂದ ಕೆರಳಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. 

ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ಸಭೆ ಮಾಡಲೂ ನಮಗೆ ಅವಕಾಶ ಕೊಟ್ಟಿಲ್ಲ. ಈಗ ಪ್ರತಿಭಟನೆ ಮಾಡಲೂ ಅವಕಾಶವಿಲ್ಲವೇ? ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರ ಬೋಗಸ್‌ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ರಾಜ್ಯ ಸರ್ಕಾರ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಹಿತ ಕಾಯುವ ಬದಲು ಜನ ವಿರೋಧಿಯಾಗಿ ನಡೆದುಕೊಂಡಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ಬೋಗಸ್ ಪ್ಯಾಕೇಜ್. ಪ್ಯಾಕೇಜ್‌ನ ಒಂದು ರೂಪಾಯಿ ಕೂಡ ಯಾರಿಗೂ ತಲುಪಿಲ್ಲ. ಒಬ್ಬ ಫಲಾನುಭವಿಗೂ ಒಂದು ಸಾವಿರ ರೂ. ಕೊಟ್ಟಿಲ್ಲ. ಬಜೆಟ್‌ನಲ್ಲಿರುವ ಯೋಜನೆಗಳನ್ನು ತಿರುಚಿ ಶಹಬ್ಬಾಶ್‌ಗಿರಿ ತೆಗೆದುಕೊಳ್ಳುವ ಪ್ರಯತ್ನವನ್ನು ಮೋದಿ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಜನಹಿತ ಕಾಪಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. 

ಭಾಷಣದ ಬಳಿಕ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಘೋಷಣೆ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಅವರನ್ನು ಅನುಸರಿಸಿ ತಪ್ಪು ಘೋಷಣೆ ಹಾಕಿದ ಮುಖಂಡರನ್ನು ಸಿದ್ದರಾಮಯ್ಯ ಜೋರಾಗಿಯೆ ಗದರಿಸಿದರು. ಪ್ಯಾಕೇಜ್ ಘೋಷಣೆ ಮಾತ್ರ ಮಾಡಲಾಗಿದೆ, ಬಿಡುಗಡೆ ಆಗಿಲ್ಲ.
 
ಸರಿಯಾಗಿ ಘೋಷಣೆ ಹಾಕಿ ಎಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕರನ್ನು ಗದರಿದರು. ಸಿದ್ದರಾಮಯ್ಯ ಅವರ ಆಕ್ರೋಶ ಎಷ್ಟರ ಮಟ್ಟಿಗೆ ಇತ್ತು ಅಂದರೆ ಪಕ್ಕದಲ್ಲಿದ್ದ ಗಟ್ಟಿ ವ್ಯಕ್ತಿತ್ವದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಒಂದು ಕ್ಷಣ ದಂಗಾದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೆ ಜೆ ಜಾರ್ಜ್, ಆಂಜನೇಯ, ಬಿ. ಕೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ಎಸ್ ಆರ್ ಪಾಟೀಲ್, ಐವಾನ್ ಡಿಸೋಜ, ಸತೀಶ್ ಜಾರಕಿಹೊಳಿ ಸೇರಿದಂತೆ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.

SCROLL FOR NEXT