ರಾಜಕೀಯ

ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯನ್ನು ಸಂಪುಟದಿಂದ ಕೈಬಿಡಿ: ಸಿದ್ದರಾಮಯ್ಯ ಒತ್ತಾಯ

Raghavendra Adiga

ಬೆಂಗಳೂರು: ರೈತ ಮಹಿಳೆಯನ್ನು ಅವಾಚ್ಯ ಪದ ಬಳಸಿ ನಿಂದಿಸಿದ ಸಚಿವ ಮಾಧುಸ್ವಾಮಿಯನ್ನು ತಲಕ್ಷಣ ಸಂಪುಟದಿಂದ ಕೈಬಿಟ್ಟು ಸರ್ಕಾರದ ಮಾನ‌ ಉಳಿಸಬೇಕು ಎಂದು ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

"ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಸಿಎಂ ಯಡಿಯೂರಪ್ಪನವರು ತಕ್ಷಣ ಸಚಿವರು, ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು." ಸಿದ್ದರಾಮಯ್ಯ ಟ್ವೀಟ್ ಮಾಡಿ ತಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ

ಕೋಲಾರದ ಎಸ್‌.ಅಗ್ರಹಾರದಲ್ಲಿ ಬುಧವಾರ ಕೆರೆಗಳ ಒತ್ತುವರಿ ತೆರವಿಗಾಗಿ ಮನವಿ ಸಲ್ಲಿಸಿದ್ದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಸದಸ್ಯೆ ನಳಿನಿ ಅವರ ಮೇಲೆ ಸಚಿವ ಮಾಧುಸ್ವಾಮಿ ಅವಾಚ್ಯ ಶಬ್ದಗಳ ಬಳಕೆ ಮಾಡಿ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.

ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಎಸ್‌.ಅಗ್ರಹಾರ ಗ್ರಾಮದ ಕೆರೆ ಪರಿಶೀಲನೆಗಾಗಿ ಬಂದಿದ್ದ ಸಚಿವರಿಗೆ ನಳಿನಿಯವರು ಕೆರೆ ಒತ್ತುವರಿಯ ತೆರವಿಗಾಗಿ ಮನವಿ ಮಾಡಿದ್ದಾಗ ಸಚಿವರು , ‘ಹೇ ರಾಸ್ಕಲ್‌, ಮುಚ್ಚು ಬಾಯಿ’ ಎಂದು ಗದರಿದ್ದಾರೆ. ಇದರಿಂದ ಕೆರಳಿದ ಮಹಿಳಾ ಸದಸ್ಯರು ಸಚಿವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಗಲಿಬಿಲಿಗೊಂಡ ಸಚಿವರು ಮಹಿಳೆಯರನ್ನು ದೂರ ಕಳಿಸುವಂತೆ ಪೋಲೀಸರಿಗೆ ಹೇಳಿದ್ದಾರೆ.  ಆಗ ಸಚಿವ ಆದೇಶದಂತೆ ಮಹಿಳೆಯರನ್ನು ಕರೆದೊಯ್ಯಲು ಹೋದ ಪೋಲೀಸರ ಮೇಲೆ ಮಹಿಳೆಯರು ಸಿಟ್ತಾಗಿದ್ದು ಸ್ಥಳದಲ್ಲಿ ಗೊಂದಲ ವಾತಾವರಣ ಮೂಡಿತ್ತು.

ಬಳಿಕ ಅಲ್ಲಿನ ಮಹಿಳೆಯರನ್ನು ಎಳೆದೊಯ್ದು ಪೋಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.  

SCROLL FOR NEXT