ರಾಜಕೀಯ

ಮೋದಿ ಆಡಳಿತ ಭಾರತವನ್ನು ಶೂನ್ಯಸ್ಥಿತಿಗೆ ಕೊಂಡೊಯ್ದಿದೆ: ಡಿ.ಕೆ. ಶಿವಕುಮಾರ್ 

Raghavendra Adiga

ಬೆಂಗಳೂರು: ಕಳೆದ 50 ವರ್ಷಗಳಲ್ಲಿ ನಿರ್ಮಾಣವಾಗಿದ್ದ ಹೊಸ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಆಡಳಿತಾವಧಿಯಲ್ಲಿ ಶೂನ್ಯಸ್ಥಿತಿಗೆ ಕೊಂಡೊಯ್ದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕೇಂದ್ರದ ಒಂದು ವರ್ಷದ ಆಡಳಿತವನ್ನು ಗಮನಿಸಿದ್ದು, ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಮೋದಿಯಂತಹ ಜನವಿರೋಧಿ ಸರ್ಕಾರವನ್ನು ಇದೂವರೆಗೂ ನೋಡಿಯೇ ಇಲ್ಲ ಎಂದು ಹರಿಹಾಯ್ದರು.

ಸ್ವಾತಂತ್ರ್ಯ ಬಂದ ಮೇಲೆ ದೇಶವನ್ನು ಉಳಿಸುವುದಕ್ಕಾಗಿ ನಮ್ಮ ಸಂವಿಧಾನ , ಗಣರಾಜ್ಯವನ್ನು ದೊಡ್ಡ ಆಸ್ತಿಯಾಗಿ ಸ್ವೀಕಾರ ಮಾಡಿದ್ದೇವೆ. ಆದರೆ ಮೋದಿ ನೇತೃತ್ವದ ಸರ್ಕಾರ ನಾನು ಭಾರತೀಯನಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ. ಯುವಕರ ಸಹಕಾರದಿಂದ ಮೋದಿ ಪ್ರಧಾನಿಯಾದರು. ಆದರೆ ಯುವಕರಿಗೆ ಮೋದಿ ದೊಡ್ಡಮಟ್ಟದ ನಿರುದ್ಯೋಗವನ್ನು ಸೃಷ್ಟಿ ಮಾಡಿದರು. ಡಾಲರ್ ಮೌಲ್ಯ ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ತೈಲದ ಬೆಲೆ ಕುಸಿದಿದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಬೆಲೆಯನ್ನು ಹೆಚ್ಚಿಸಲಾಗಿದೆ. ಬೇರೆ ದೇಶಗಳಲ್ಲಿ ತೆರಿಗೆ ಕಡಿಮೆಯಾದರೆ ನಮ್ಮ ದೇಶದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುವಂತೆ ತೆರಿಗೆ ಹೆಚ್ಚಿಸಲಾಗಿದೆ. ಜಿಡಿಪಿ ಶೇ. 0.1ರಷ್ಟು ಆಗಿದೆ. ದೇಶದಲ್ಲಿ ಸರಿಯಾದ ಆರ್ಥಿಕ ನೀತಿ ಇಲ್ಲ. 40 ವರ್ಷಗಳಲ್ಲಿ ಇಲ್ಲದ ದಾಖಲೆ ಪ್ರಮಾಣದಲ್ಲಿ ಶೇ.24 ರಷ್ಟು ನಿರುದ್ಯೋಗ ಸೃಷ್ಟಿಯಾಗಿದೆ. ಕೋವಿಡ್ ನಿಂದ ಇದು ಇನ್ನೂ ಹೆಚ್ಚಿದೆ ಎಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

 ಕೊರೊನಾ ಸಂಕಷ್ಟವನ್ನು ಎದುರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಫುಲ್ ಪ್ಲಾಪ್ ಆಗಿದೆ. ರಾಜ್ಯ ಸರ್ಕಾರಕ್ಕೆ ಕೋವಿಡ್ ವಿಷಯದಲ್ಲಿ ವಿಪಕ್ಷವಾಗಿ ತಾವು ಸಹಕಾರ ನೀಡಿದ್ದೆವು. ಆದರೆ ಯಾವುದೇ ಉಪಯೋಗವಾಗಲಿಲ್ಲ. ಕೋವಿಡ್ ಸಂಕಷ್ಟ ಕುರಿತು ಚರ್ಚಿಸಲು ಸರ್ಕಾರ ಹೆಜ್ಜೆ ಇಟ್ಟಿರಲಿಲ್ಲ. ತಾವು ಸರ್ವಪಕ್ಷ ಸಭೆ ಕರೆಯುವಂತೆ ಸಾಕಷ್ಟು ಬಾರಿ ಒತ್ತಾಯಿಸಿದ ಮೇಲೆ ಸರ್ವಪಕ್ಷ ಸಭೆ ಕರೆಯಲಾಯಿತು. ಸರ್ಕಾರಕ್ಕೆ ವ್ಯಾವಹಾರಿಕ ಜ್ಞಾನ ಇಲ್ಲ, ಅಧಿಕಾರಿಗಳಿಗೆ ಬೆಲೆ ಇಲ್ಲ. ಪ್ರತಿ ದಿನ ಕೊರೊನಾ ವರದಿಯನ್ನು ಬಿಡುಗಡೆ ಮಾಡಬೇಕು. ನಮ್ಮ ರಾಜ್ಯವನ್ನು ದೇವರೇ ಕಾಪಾಡಬೇಕು ಎಂದು ಮಾರ್ಮಿಕವಾಗಿ ನುಡಿದರು.

ರೈತ , ಶ್ರಮಿಕ ವರ್ಗದ ಜನರಿಗೆ ನ್ಯಾಯ ಕೊಡುವುದಕ್ಕೆ ಈ ಸರ್ಕಾರ ಚಿಂತನೆ ಮಾಡಿಲ್ಲ. ಸಣ್ಣ ಉದ್ಯಮಿಗಳಿಗೆ ಯಾವುದೇ ಸಹಾಯ ಮಾಡಲಿಲ್ಲ. ಒಟ್ಟಾರೆ ಅಭಿವೃದ್ಧಿಗೆ ಒಂದೇ ಒಂದು ಕಾರ್ಯಕ್ರಮ ರೂಪಿಸಲಿಲ್ಲ. ರೈತರು ಬದುಕಿದ್ದಾಗ ಪರಿಹಾರ ಕೊಡದ ಸರ್ಕಾರ ಅವರ ತಿಥಿಗೆ ಹಣ ಕೊಡುತ್ತದೆಯೇ ಎಂದು ತಿವಿದ ಶಿವಕುಮಾರ್, ಶಿಕ್ಷಣ ಸಂಸ್ಥೆಗಳನ್ನು ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ. ಹಸಿವಿನಿಂದ ಇವತ್ತು ಸಾವಿರಾರು ಜನ ಸತ್ತಿದ್ದಾರೆ. ಇವರಿಗೆ ಅಧಿಕಾರ ನಡೆಸುವುದು ಗೊತ್ತಿಲ್ಲ. ರೈತರ ಸಾವಿಗೆ ಸರ್ಕಾರವೇ ಕಾರಣ. ಈ ವರ್ಷ ಮಾರಕವಾದ ವರ್ಷ , ಪ್ರತಿಯೊಬ್ಬರ ಬದುಕು ಶೂನ್ಯ ಆಗುವುದಕ್ಕೆ ಬಿಜೆಪಿಯ ನಾಯಕರೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.

SCROLL FOR NEXT