ರಾಜಕೀಯ

ಸಿಬಿಐ ವಶಕ್ಕೆ ಪಡೆದ ಮಾತ್ರಕ್ಕೆ ವಿನಯ್ ಕುಲಕರ್ಣಿ ಮಟ್ಟ ಹಾಕಲು ಸಾಧ್ಯವಿಲ್ಲ; ಇದು ರಾಜಕೀಯ ದುರುದ್ದೇಶ: ಡಿಕೆಶಿ

Shilpa D

ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುವ ಸಲುವಾಗಿ ಕಾಂಗ್ರೆಸ್ ಮುಖಂಡರ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದ್ದು ಪ್ರಕರಣ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವುದನ್ನು ನಾನು ಗಮನಿಸಿದ್ದೇನೆ. ಈ ಹಿಂದೆ, ವಿನಯ್ ಕುಲಕರ್ಣಿ ಬಳಿ ಎಲ್ಲವನ್ನೂ ವಿಚಾರಿಸಿದ್ದೇನೆ. ಈಗಾಗಲೇ ಅವರ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸಿ ಪೊಲೀಸರು ವರದಿ ನೀಡಿದ್ದಾರೆ’ ಎಂದರು.

ಈಗಾಗಲೇ ರಾಜ್ಯ ಪೊಲೀಸರು ಪ್ರಕರಣದ ಕುರಿತಾಗಿ ತನಿಖೆ ನಡೆಸಿದ್ದಾರೆ.ಇದೀಗ ಸಿಬಿಐ ನಡೆಸುತ್ತಿದೆ. ಇವೆಲ್ಲವನ್ನು ಗಮನಿಸಿದರೆ ಸ್ಥಳೀಯ ಬಿಜೆಪಿ ನಾಯಕರಿಗೆ ವಿನಯ್ ಕುಲಕರ್ಣಿಯನ್ನು ರಾಜಕೀಯವಾಗಿ ಮಟ್ಟ ಹಾಕುವ ಉದ್ದೇಶ ಇದೆ ಎಂದು ಆರೋಪಿಸಿದರು

ನಾನು ಆ ಭಾಗಕ್ಕೆ ಭೇಟಿ ಕೊಟ್ಟಾಗ ಹಲವರು ತನಿಖೆಯ ಕುರಿತಾಗಿ ತಮ್ಮ ನೋವು ತೋಡಿಕೊಂಡಿದ್ದರು. ಆದರೆ ಸಿಬಿಐ ಅಧಿಕಾರಿಗಳು ಕಾನೂನು ಬದ್ಧವಾಗಿ ನಡೆದುಕೊಳ್ಳುತ್ತಾರೆ. ಏನೇ ಒತ್ತಡ ಇದ್ದರೂ ಕಾನೂನು ಪ್ರಕಾರವಾಗಿ ತನಿಖೆ ನಡೆಯುತ್ತದೆ ಎಂದರು.

ಸಿಬಿಐನವರು ರಾಜಕೀಯಕ್ಕೆ ತಲೆಬಾಗಬಾರದು. ಕೆ.ಜೆ. ಜಾರ್ಜ್‌ಗೆ ಸಿಬಿಐನವರು ಎಷ್ಟು ಕಿರುಕುಳ ಕೊಟ್ಟಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜಕಾರಣದಲ್ಲಿ ಚಕ್ರ ತಿರುಗುತ್ತಿರುತ್ತದೆ. ಸಿಬಿಐನವರು ರಾಜಕೀಯ ಅಸ್ತ್ರ ಆಗಬಾರದು’ ಎಂದರು.
.

SCROLL FOR NEXT