ರಾಜಕೀಯ

ಮುಂದಿನ ಚುನಾವಣೆಗಳ ಮೇಲೆ ಕಣ್ಣು: ಪಕ್ಷ ಸಂಘಟನೆಗೆ ಬಿಜೆಪಿ ಮುಂದು

Manjula VN

ಮಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗಿನ್ನೂ ಎರಡೂವರೆ ವರ್ಷ ಬಾಕಿಯಿದ್ದು, ಈ ನಡುವಲ್ಲೇ ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷ ಯಾವುದೇ ಅವಕಾಶವನ್ನು ತೆಗೆದುಕೊಳ್ಳದೆ, ಚುನಾವಣೆಗಳಿಗೆ ಈಗಲೇ ಸಿದ್ಧತೆಗಳನ್ನು ನಡೆಸಲು ಆರಂಭಿಸಿದೆ. 

ಇದರಂತೆ ಗುರುವಾರ ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿದ್ದು, ಮುಂದಿನ ಚುನಾವಣೆ ರಾಜ್ಯದಲ್ಲಿ 140-150 ಸ್ಥಾನಗಳ ಸ್ವಂತ ಬಲದಿಂದ ಮತ್ತೆ ಅಧಿಕಾರಕ್ಕೆ ಬರುವತ್ತ ಗಮನಹರಿಸಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ. 

ಈ ಗುರಿಯನ್ನು ಸಾಧಿಸಲುವ ಸಲುವಾಗಿ ರಾಜ್ಯದ ಬಿಜೆಪಿ ನಾಯಕರು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಈ ಚುನಾವಣೆಗಳೇ 2023ರಲ್ಲಿ ಎದುರಾಗುವ ಚುನಾವಣೆಗೆ ಆರಂಭಿಕ ಮೆಟ್ಟಿಲುಗಳಾಗಿವೆ ಎಂದು ಪಕ್ಷ ಪರಿಗಣಿಸಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಹಿಡಿದು ಪಕ್ಷದ ಎಲ್ಲಾ ಉನ್ನತ ನಾಯಕರು ಹಾಗೂ ಪಕ್ಷದ ವರಿಷ್ಠರಿಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಂತೆಯೇ ಈ ಚುನಾವಣೆಯೂ ಅತ್ಯಂತ ಮುಖ್ಯವಾಗಿದೆ ಎಂದು ಸೂಚಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಪಕ್ಷದ ಆಶಯಗಳ ಕುರಿತು ಸ್ಪಷ್ಟಪಡಿಸಿದ್ದಾರೆ. 

ಬಿಜೆಪಿಯ ಶಾಶ್ವತ ಗೆಲುವು ಎಂದರೆ, ಶಾಸಕ, ಸಂಸದರ ಗೆಲುವಲ್ಲ. ಮತಗಟ್ಟೆ ಗೆಲ್ಲುವುದು. ಬಿಜೆಪಿ ಕಾರ್ಯಕರ್ತರಿಗೆ ಇದು ಸೌಭಾಗ್ಯದ ವರ್ಷ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇದು ಸ್ವರ್ಣಯುಗವಾಗಿದೆ. ರಾಜ್ಯದ 311 ಮಂಡಲ, 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಮತಗಟ್ಟೆ ಸಂಘಟನೆ ಪೂರ್ತಿಯಾಗಿದೆ. ಇದರ ಜೊತೆ ಪಂಚರತ್ನ ಹಾಗೂ ಪೇಜ್ ಪ್ರಮುಕ್ ನೇಮಕ ಕೂಡ ಮಾಡಲಾಗಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಗೆಲುವು ಪಡೆಯಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.80ರಷ್ಟು ಬಿಜೆಪಿ ಗೆಲ್ಲಿಸುವ ಗುರಿ ನಮ್ಮದಾಗಬೇಕು ಎಂದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದೆ ವಂದಿಸಿದರು.

SCROLL FOR NEXT