ರಾಜಕೀಯ

ಶಿರಾದಲ್ಲಿ ಗೆದ್ದ ಕಮಲ: ವಿಜಯೇಂದ್ರ, ರವಿ ಕುಮಾರ್, ಗೋವಿಂದ ಕಾರಜೋಳರ ಒಗ್ಗಟ್ಟಿನ ಕೆಲಸ

Sumana Upadhyaya

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಕಳೆದ ಸೆಪ್ಟೆಂಬರ್ 21ರಂದು ತುಮಕೂರಿನ ಶಿರಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಆದರೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಅವರು ಅದಕ್ಕಿಂತಲೂ ಮೊದಲು ತಳಮಟ್ಟದಲ್ಲಿ ಕೆಲಸ ಆರಂಭಿಸಿದ್ದರು. ನಂತರ ಅಕ್ಟೋಬರ್ ತಿಂಗಳಲ್ಲಿ ಅವರನ್ನು ಕ್ಷೇತ್ರದ ಉಸ್ತುವಾರಿಯ ಎಂಟು ಮಂದಿಯಲ್ಲಿ ಒಬ್ಬರನ್ನಾಗಿ ಬಿಜೆಪಿ ನೇಮಕ ಮಾಡಿತು.ಹಾಕಿಕೊಂಡಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಹೇಗೆಂದು ವಿಜಯೇಂದ್ರ ಲೆಕ್ಕಹಾಕಿಕೊಂಡಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕೇಂದ್ರ ನಾಯಕತ್ವದಿಂದ ಟಿಕೆಟ್ ತಿರಸ್ಕೃತಗೊಂಡಿದ್ದ ಬಿ ವೈ ವಿಜಯೇಂದ್ರ, ಇದೀಗ ಮತ್ತೊಮ್ಮೆ ಚುನಾವಣೆಯ ನಾಯಕತ್ವ ವಹಿಸಿಕೊಂಡು ಗೆಲ್ಲಿಸಿ ತೋರಿಸಿದ್ದಾರೆ. ಶಿರಾ ಕ್ಷೇತ್ರದ ಉಪ ಚುನಾವಣೆ ಗೆಲ್ಲಲು ಮುಖ್ಯ ಕಾರಣ ವಿಜಯೇಂದ್ರ ಅವರೇ. ಕಳೆದ ವರ್ಷ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಗೆದ್ದ ನಂತರ ಅಲ್ಲಿಂದ ವಿಜಯೇಂದ್ರ ಸಾಕಷ್ಟು ಪಾಠ, ಅನುಭವಗಳನ್ನು ಕಲಿತಿದ್ದಾರೆ.

ಪಕ್ಷದ ಕ್ಷೇತ್ರಗಳಿಂದ ಕ್ಯಾಡರ್ ಗಳ ಬೆಂಬಲ ಪಡೆಯುವುದಲ್ಲದೆ ಮಹಿಳಾ ಮತ್ತು ಯುವ ಮತದಾರರನ್ನು ಗೆಲ್ಲುವಲ್ಲಿ ಸಹ ಸಾಕಷ್ಟು ಕೆಲಸ ಮಾಡಿದ್ದಾರೆ. ಜಾತಿ ಮೀರಿ ಮತ ಚಲಾಯಿಸುವಂತೆ ನಾವು ಮತದಾರರ ಮನ ಒಲಿಸಿದ್ದೇವೆ. ಮಹಿಳೆಯರು ಮತ್ತು ಯುವಕರು ನಮ್ಮ ಬೆಂಬಲಕ್ಕೆ ಬಂದಿದ್ದಾರೆ ಎಂದು ವಿಜಯೇಂದ್ರ ಹೇಳುತ್ತಾರೆ.

ನಾವು ಜನರಲ್ಲಿ ಒಂದು ಅವಕಾಶ ಕೊಡಿ ಎಂದು ಕೇಳಿದೆವು. ಅಭಿವೃದ್ಧಿಗೆ ಜನ ಮತ ಹಾಕಿದ್ದಾರೆ. ಅಧಿಕಾರದಲ್ಲಿರುವ ಪಕ್ಷಕ್ಕೆ ಮತ ಹಾಕುವುದು ಸಹ ಮತದಾರರ ಮುಖ್ಯ ಗುರಿಯಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಜನರ ಅತೃಪ್ತಿಯನ್ನು ನಮ್ಮ ಕಡೆಗೆ ಸೆಳೆಯುವುದು ನಮ್ಮ ಮೂಲ ಮಂತ್ರವಾಗಿದೆ ಎಂದು ವಿಜಯೇಂದ್ರ ಹೇಳಿದರು. 

ಶಿರಾದಲ್ಲಿ ವಿಜಯೇಂದ್ರ ಅವರಿಗೆ ಸಾಥ್ ಕೊಟ್ಟವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ. ಜಾತಿ ಸಮೀಕರಣ, ಸಂಘಟಿತ ಹೋರಾಟ ಬಿಜೆಪಿಗೆ ವರವಾಗಿದೆ. ಹಿಂದುಳಿದ ಮತ್ತು ದಲಿತ ಮತಗಳನ್ನು ಸಹ ಸೆಳೆಯುವಲ್ಲಿ ಗೋವಿಂದ ಕಾರಜೋಳ ಅವರು ಗೆದ್ದಿದ್ದಾರೆ. 

SCROLL FOR NEXT