ರಾಜಕೀಯ

ಬಿಜೆಪಿ ನಾಯಕರಿಗೆ ನಿಯಂತ್ರಣವೇ ಇಲ್ಲದಂತಾಗಿದೆ: ಡಿ.ಕೆ. ಶಿವಕುಮಾರ್

Manjula VN

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಯಾರ ನಿಯಂತ್ರಣವೂ ಇಲ್ಲದಂತಾಗಿದ್ದು, ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಮನಸ್ಥಿತಿಗೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಸದಾಶಿವ ನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಾಗಲಕೋಟೆ ಮಹಾಲಿಂಗ ಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂದರ್ಭದಲ್ಲಿ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಕಾಂಗ್ರೆಸ್ ಸದಸ್ಯೆ ಸವಿತಾ ಹುರಕಡ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. 

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಇದು ಬಿಜೆಪಿಯ ಸಂಸ್ಕೃತಿ.ಬಿಜೆಪಿ ನಾಯಕರು ಯಾರಿಗೆ ಏನು ಬೇಕಾದರೂ ಮಾಡಬಹುದು ಎಂಬ ಹವ್ಯಾಸ ಹಾಗೂ ಅಭ್ಯಾಸ ಬೆಳೆಯುತ್ತಿದೆ.ಬಿಜೆಪಿಯ ಯಾವುದೇ ಶಾಸಕರು, ನಾಯಕರಿಗೆ ನಿಯಂತ್ರಣವೇ ಇಲ್ಲದಂತಾಗಿದೆ. ಕಾರ್ಪೊರೇಟರ್ ನಿಂದ ಕೌನ್ಸಲರ್ ವರೆಗೂ ಎಲ್ಲೆಡೆ ಇಂತಹ ಘಟನೆ ನಡೆಯುತ್ತಿದೆ. ಬೇರೆ ಸಮಯದಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸುತ್ತಾರೆ. ಈ ಘಟನೆ ಪೊಲೀಸರ ಸಮ್ಮುಖದಲ್ಲೇ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ನಾವು ಕಾದು ನೋಡುತ್ತಿದ್ದೇವೆ. ಇವರ ಕ್ರಮದ ನಂತರ ನಾವು ಮಾತನಾಡುತ್ತೇವೆ. ಈ ವಿಚಾರವನ್ನು ನಾನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡುತ್ತೇನೆ ಎಂದು ಅವರು ತಿಳಿಸಿದರು.

SCROLL FOR NEXT