ರಾಜಕೀಯ

ಎಲ್ಲಾ ಸಮುದಾಯಗಳನ್ನು ಒಂದಾಗಿ ಕಂಡಿದ್ದರಿಂದ ಕಮಲ ಅರಳಿದೆ: ಬಿ.ವೈ. ವಿಜಯೇಂದ್ರ

Manjula VN

ಕಲಬುರಗಿ: ಬಿಜೆಪಿ ಪಕ್ಷ ಎಲ್ಲಾ ಸಮುದಾಯಗಳನ್ನು ಒಂದಾಗಿ ಕಂಡಿದ್ದರಿಂದ ಉಪಚುನಾವಣೆಯಲ್ಲಿ ಕಮಲ ಅರಳಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯ ಮೂಲಕ ಬಸವಕಲ್ಯಾಣ ಕಡೆ ಹೊರಟ್ಟಿದ್ದ ವಿಜಯೇಂದ್ರ ಅವರು ಎಂಎಲ್ ಸಿ ಬಿ.ಜಿ. ಪಾಟೀಲ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದು, ಬಿಜೆಪಿ ಎಲ್ಲ ಸಮುದಾಯಗಳನ್ನು ಒಂದಾಗಿ ಕಂಡಿರುವುದರಿಂದ ಉಪಚುನಾವಣೆಯಲ್ಲಿ ಕಮಲ ಅರಳಿದೆ‌ ಎಂದರು.

ರಾಜ್ಯ ಉಪಾಧ್ಯಕ್ಷನಾದ ಬಳಿಕ  ಮೊದಲ ಬಾರಿ ಕಲಬುರಗಿಗೆ ಬಂದಿದ್ದೇನೆ. ಹಿಂದೆ 15 ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿದ್ದು, 15 ರಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿ ಜಯಶಾಲಿಯಾಗಿತ್ತು ಎಂದರು.

ಮೊನ್ನೆ ನಡೆದ ಚುನಾವಣೆಯಲ್ಲಿ 2 ಕ್ಷೇತಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಶಿರಾ ಕ್ಷೇತ್ರ ದೊಡ್ಡ ಸವಾಲಾಗಿತ್ತು. ಅಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಮುಂದೆ ಎಲ್ಲ ಕಡೆ ಕಮಲ ಅರಳಲಿದೆ ಎಂಬ ವಿಶ್ವಾಸವಿದ್ದು, ಯಡಿಯೂರಪ್ಪ ಅವರ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದರು.

ಬರುವ ದಿನಗಳಲ್ಲಿ ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಬಸವಕಲ್ಯಾಣದಲ್ಲಿ ಇಂದು ಮುಖಂಡರನ್ನು ಭೇಟಿಯಾಗಿ ಬೆಂಗಳೂರಿಗೆ ವಾಪಸ್ಸಾಗುವೆ.

ಬಿಜೆಪಿ ರಾಜ್ಯಾಧ್ಯಕ್ಷರು ಯಾವ ಕ್ಷೇತ್ರದ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿರ್ವಹಿಸುವೆ ಎಂದ ಅವರು ಬಸವಕಲ್ಯಾಣದಲ್ಲಿ ನಾನು ಆಕಾಂಕ್ಷಿಯಲ್ಲ. ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂದರು.

ಪಕ್ಷದ ಹೈಕಮಾಂಡ್ ನಿರ್ಣಯಿಸುವ ಅಭ್ಯರ್ಥಿ ಪರ ಕಾರ್ಯನಿರ್ವಹಿಸುವುದ್ದಾಗಿ ಅವರು ತಿಳಿಸಿದರು.

SCROLL FOR NEXT