ರಾಜಕೀಯ

ವರಿಷ್ಠರ ಭೇಟಿ ಮುಂದೂಡಿದ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ ಸಾಧ್ಯತೆ

Lingaraj Badiger

ಬೆಂಗಳೂರು: ಸಂಪುಟ ವಿಸ್ತರಣೆ, ಪುನಾರಚನೆ ಸಂಬಂಧ ವರಿಷ್ಠರ ಭೇಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೂಡಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗುವುದು ನಿಶ್ಚಿತವಾಗಿದ್ದು, ದೀಪಾವಳಿ ನಂತರವೇ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗಲಿದೆ.

ಬಿಹಾರ ಮುಖ್ಯಮಂತ್ರಿ ಆಯ್ಕೆ ಹಾಗೂ ಸರ್ಕಾರ ರಚನೆಯಲ್ಲಿ ವರಿಷ್ಠರು ನಿರತರಾಗಿರುವುದರಿಂದ ಸದ್ಯಕ್ಕೆ ಭೇಟಿಯನ್ನು ಮುಂದೂಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಇವತ್ತು ದೆಹಲಿಗೆ ಹೋಗಬೇಕೆಂದಿದ್ದೆ. ಆದರೆ ಬಿಹಾರ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ವರಿಷ್ಠರು ನಿರತರಾಗಿದ್ದಾರೆ. ಬಿಹಾರದಲ್ಲಿ ಸರ್ಕಾರ ರಚನೆ ಬಳಿಕ ಅವರು ಕರೆದ ಕೂಡಲೇ ಹೋಗಿ‌ ಭೇಟಿ ಮಾಡುತ್ತೇನೆ ಎಂದರು.

ಸಂಪುಟ ಪುನರಾಚನೆಯೋ ಅಥವಾ ವಿಸ್ತರಣೆಯೋ ಎಂಬುದು ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು. ಜಾರಕಿಹೊಳಿ ನಿವಾಸದಲ್ಲಿ ಆಕಾಂಕ್ಷಿಗಳು ಸಭೆ ಮಾಡುತ್ತಾರೆ ಎಂದರೆ ಮಾಡಲಿ ಬಿಡಲಿ ಎಂದು ಮಾರ್ಮಿಕವಾಗಿ ಹೇಳಿದರು.

ಜಕ್ಕೂರು ಬಳಿಯಲ್ಲಿ 13 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತಿ ರಾಜ್ ಇಲಾಖೆಯಿಂದ ನಿರ್ಮಾಣಗೊಂಡಿರುವ ಮಾದರಿ ಗ್ರಾಮವನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಮಾದರಿ ಪಾರಂಪರಿಕ ಗ್ರಾಮ ಲಕ್ಷಾಂತರ ಜನರನ್ನು ಆಕರ್ಷಿಸುವಂತಿದೆ. ಇಲ್ಲಿ ಕಲಾವಿದರನ್ನು ಎಷ್ಟು ಹೊಗಳಿದರೂ ಸಾಲದು. ಅಷ್ಟು ನೈಜವಾಗಿ ಇದು ಮೂಡಿ ಬಂದಿದೆ. ಗ್ರಾಮೀಣ ಸೊಗಡನ್ನು ಪರಿಚಯಿಸುವ ಮೊದಲ ಪಾರಂಪರಿಕ ಗ್ರಾಮ ಇದಾಗಿದೆ ಎಂದರು.

ಯಾರೇ ಆಗಲಿ ಸಂಸಾರ ಸಹಿತ ಬುತ್ತಿಕಟ್ಟಿಕೊಂಡು ಬಂದು ಅರ್ಧ ದಿನ ಇಲ್ಲಿದ್ದು ಗ್ರಾಮಗಳ ಪರಂಪರೆ ಕಣ್ತುಂಬಿಕೊಳ್ಳುವಂತಾಗಲಿ. ಈ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ 1000 ಕೋಟಿ ರೂ.ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮನೆಮನೆಗೆ ನಲ್ಲಿ‌ಮೂಲಕ ನೀರು ಸರಬರಾಜು ಮಾಡುವ ಯೋಜನೆ ಜಾರಿಗೊಳಿಸಿದೆ ಎಂದರು.

SCROLL FOR NEXT